ಬೆಂಗಳೂರು: “ಕೆಲ ರಾಜಕೀಯ ಪಟ್ಟಭದ್ರರು, ಹೊಂದಾಣಿಕೆ ರಾಜಕಾರಣದ ಹರಿಕಾರರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು. ಕಲಬುರಗಿ, ರಾಯಚೂರು, ಬಳ್ಳಾರಿ, ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈಕಮಾಂಡ್ ಮಾಡದೆ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನತಿಗೆ ಕಾರಣವಾಗಿದೆ” ಎಂದು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ X ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಕಾರ್ಯಕರ್ತರ ಪಕ್ಷ ಎಂದು ಹೆಸರುವಾಸಿಯಾಗಿದ್ದ ಭಾರತೀಯ ಜನತಾ ಪಕ್ಷ ಈಗ ಕುಟುಂಬ ರಾಜಕಾರಣದಲ್ಲಿ ಮುಳುಗಿರುವುದು ವಿಷಾದನೀಯ. ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿ ಹಾಗೂ ಆಡಳಿತಾರೂಢ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿದ್ದ ಶಾಸಕರ ಉಚ್ಚಾಟನೆ ಮಾಡದೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಟೊಂಕಕಟ್ಟಿ ಕೆಲಸ ಮಾಡಿದ ನನ್ನಂತವರ ಉಚ್ಚಾಟನೆ ಮಾಡುವುದು ಪಕ್ಷದ ದ್ವಂದ್ವ ನೀತಿಗಳಿಗೆ ಹಿಡಿದ ಕೈಗನ್ನಡಿ” ಎಂದು ಅಸಮಾಧಾನ ಹೊರಹಾಕಿದ್ದಾರೆ.
“ಕಲ್ಯಾಣ ಕರ್ನಾಟಕದಲ್ಲಿ ಸದೃಢವಾಗಿದ್ದ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ್ದು ಯಾರ ‘ಅಡ್ಜಸ್ಟ್ಮೆಂಟ್ ರಾಜಕಾರಣದಿಂದ’ ಎಂದು ಪಕ್ಷದ ಪ್ರಮುಖರು ವಿಶ್ಲೇಷಿಸಲಿ” ಎಂದು ಟಾಂಗ್ ಕೊಟ್ಟಿದ್ದಾರೆ.
“ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಪ್ಪ, ಡಾ. ವಿ.ಎಸ್. ಆಚಾರ್ಯರು ಸೇರಿದಂತೆ ಪಕ್ಷದ ಅನೇಕ ಧುರೀಣರು, ಸಾವಿರಾರು ಕಾರ್ಯಕರ್ತರು ಪಕ್ಷವನ್ನು ಸಂಘಟಿಸಿದ ಪರಿಣಾಮದಿಂದಲೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದ್ದು. ಬಿಡಿಗಾಸಿಲ್ಲದೇ, ಕಾರ್ಯಕರ್ತರ ಓಡಾಟ, ಉಪಹಾರಕ್ಕೂ ಹಣವಿಲ್ಲದಿರುವ ಕಾಲಘಟ್ಟದಲ್ಲಿ ದಿವಂಗತ ಮಲ್ಲಿಕಾರ್ಜುನಪ್ಪನವರು ತಮ್ಮ ಸ್ವಂತ ಸಂಪನ್ಮೂಲದಿಂದ ಪಕ್ಷವನ್ನು ಮುನ್ನೆಡೆಸಿ ಕಾರ್ಯಕರ್ತರ ಮನೋಬಲವನ್ನು ಹೆಚ್ಚಿಸಿ ಸಂಘಟನೆಗೆ ಕಾರಣವಾದರು”.
“ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಮಲತಾಯಿ ಧೋರಣೆಯನ್ನು, ಕೃಷ್ಣ ಯೋಜನೆಯ ವಿಳಂಬದ ಬಗ್ಗೆ ಧ್ವನಿ ಎತ್ತಿದ್ದು ನಾವೇ, ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ ಭ್ರಷ್ಟರನ್ನು ಕಿತ್ತೊಗೆಯಲು ಸ್ಪರ್ಧಾರ್ಥಿಗಳ ಜೊತೆಗೆ ನಿಂತಿದ್ದು ನಾವೇ. ಬಾಣಂತಿಯರ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದು ನಾನೇ”.
“ಪಕ್ಷದಲ್ಲಿ ಆಗಬೇಕಾದ ಕೆಲ ಬದಲಾವಣೆಗಳು, ಸುಧಾರಣೆಗಳನ್ನು ಸೂಚಿಸಿದ್ದಕ್ಕೆ ನಮ್ಮ ನಿಲುವು ಕೆಲವರಿಗೆ ‘ಅಪಥ್ಯ’ ವಾಗಿದೆ ಎಂದು ಹೇಳಿದ್ದಾರೆ. ಅಡ್ಜಸ್ಟ್ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ. ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ, ನಿಜವಾದ ಜನ ಪರ ಕಾಳಜಿ ಇರುವ ನಾಯಕರಿಗೆ ಪಕ್ಷ ಅವಕಾಶ ನೀಡಬೇಕು. ಕಾಟಾಚಾರಕ್ಕೆ ಸರ್ಕಾರದ ನೀತಿಗಳನ್ನು ಖಂಡಿಸಿ ಸಂಜೆ ವೇಳೆ ಅವರ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗವಹಿಸುವ ನಾಯಕರ ಅವಶ್ಯ ಪಕ್ಷಕ್ಕಿಲ್ಲ” ಎಂದು ಕಿಡಿಕಾರಿದ್ದಾರೆ.