ಬೈಲಹೊಂಗಲ : – ಕಾರ್ಮೆಲ್ ವಿದ್ಯಾವಿಕಾಸ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ರಜತ ಮಹೋತ್ಸವ.ಬೈಲಹೊಂಗಲ : ವಿಶೇಷಚೇತನ ಮಕ್ಕಳು ದೇವರ ಮಕ್ಕಳಿದ್ದಂತೆ, ಈ ಮಕ್ಕಳ ಲಾಲನೆ, ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೈಲಹೊಂಗಲ ನಗರದ ಕಾರ್ಮೆಲ್ ವಿದ್ಯಾ ವಿಕಾಸ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಬುದ್ಧಿಮಾಂದ್ಯತೆ ಹೊಂದಿದ ಮಕ್ಕಳಿಗೆ ಓದು ಬರಹ, ಶಿಸ್ತು ಮತ್ತು ಸಾಮಾಜಿಕ ಕೌಶಲ್ಯ, ದೈನಂದಿನ ಕೆಲಸ ಮಾಡುವ ಬಗೆ, ಈ ಎಲ್ಲವನ್ನೂ ತಾಳ್ಮೆಯಿಂದ ಕಲಿಸಿಕೊಡುವುದು ಅತ್ಯವಶ್ಯಕ ಎಂದು ಹೇಳಿದರು.
ಕಳೆದ 25 ವರ್ಷದಿಂದ ಸಾರ್ಥಕ ಸೇವೆ ಮಾಡುತ್ತಿರುವ ಶಾಲೆಯ ಸಾಧನೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ವಿಶೇಷ ಚೇತನ ಮಕ್ಕಳಿಗೆ ಧೈರ್ಯ ತುಂಬಿ ಸಾಮಾನ್ಯರೊಂದಿಗೆ ಸ್ಪರ್ಧಿಸುವ ಮಟ್ಟಿಗೆ ಬೆಳೆಸುವುದು ಸುಲಭದ ಮಾತಲ್ಲ. ಇಂಥ ಮಹಾನ್ ಕಾರ್ಯ ಮಾಡುತ್ತಿರುವ ಶಾಲೆಯ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಮದರ್ ಥೆರೆಸಾ ವಿಶೇಷ ಚೇತನರಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಸಂಗೊಳ್ಳಿ ರಾಯಣ್ಣ, ಓನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮನಂಥ ಸಾಧಕರ ಸಾಧನೆಯನ್ನು ಪರಿಚಯಿಸುವ ಮೂಲಕ ವಿಶೇಷ ಚೇತನರಿಗೆ ಧೈರ್ಯ ತುಂಬಬೇಕಿದೆ. ಕ್ರೈಸ್ತ ಮಿಷಿನರಿ ಸಂಸ್ಥೆಗಳು ಶಿಸ್ತು ಹಾಗೂ ಸಮಯ ಪಾಲನೆಗೆ ಹೆಸರುವಾಸಿಯಾಗಿದ್ದು, ಭಾರತದಲ್ಲಿ ಶಿಕ್ಷಣ ವ್ಯವಸ್ಥೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿವೆ ಎಂದು ಸಚಿವರು ತಿಳಿಸಿದರು.
ನನ್ನ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಚೇತನ ಮಕ್ಕಳ ಶಾಲೆಯ ಶಿಕ್ಷಕರ ಹಾಗೂ ಸಿಬ್ಬಂದಿ ವರ್ಗದವರಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವೇತನ ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಸಭೆಯ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಶಾಸಕರಾದ ಮಹಾಂತೇಶ್ ಕೌಜಲಗಿ, ಕಾಂಗ್ರೆಸ್ ಮುಖಂಡರಾದ ಮಹಾಂತೇಶ್ ಮತ್ತಿಕೊಪ್ಪ, ಶಾಲೆಯ ಮುಖ್ಯೋಪಾಧ್ಯಾಯರಾದ ಭಗಿನಿ ರೀಟಾ ಪಿಂಟೂ ಎ.ಸಿ, ಭಗಿನಿ ಪ್ಲಾವಿನಾ ಎ.ಸಿ, ಭಗಿನಾ ಸುದೀಪಾ ಎ.ಸಿ, ಫಾದರ್ ರಿಚರ್ಡ್, ಬೈಲಹೊಂಗಲ ಪುರಸಭೆಯ ಮಾಜಿ ಅಧ್ಯಕ್ಷರಾದ ರಾಜು ಜನ್ಮಟ್ಟಿ, ಪುರಸಭೆಯ ಸದಸ್ಯರಾದ ಅರ್ಜುನ ಕಲಕುಟಕರ್ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ :- ಪ್ರತೀಕ್ ಚಿಟಗಿ