ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಉತ್ಪಾದಕ, ಐಟಿ ಉದ್ದಿಮಗಳನ್ನು ತಂದು, ಹುಬ್ಬಳ್ಳಿ ಮಾದರಿಯಲ್ಲೇ ಬೆಳಗಾವಿ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಯ ಕ್ಷೇತ್ರ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ವ ಶೆಟ್ಟರ್ ಅವರು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಬೆಳಗಾವಿಯ ಖಡೆಬಜಾರ್ ನ ಎಂ.ಜಿ. ಟಾವರ್ ಹತ್ತಿರ ಗಾಣಿಗೇರ ಸಮಾಜದ ಅಭಿವೃದ್ಧಿ ಸಂಘದಲ್ಲಿ “ಗಾಣಗೇರ ಸಮಾಜದ ಬಂಧುಗಳೊಂದಿಗೆ ಸಭೆ ನಡೆಸಿ, ಮತಯಾಚನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ಮೋದಿಯವರು ದೇಶ ಅಲ್ಲಾ ವಿಶ್ವ ಕಂಡ ಮಹಾ ನಾಯಕ, ಕಳೆದ ಹತ್ತು ವರ್ಷದಲ್ಲಿ ಭಾರತವನ್ನು ವಿಶ್ವ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿ ನಿಲ್ಲುವಂತೆ ಪ್ರಧಾನಿ ಮೋದಿಯವರು ಮಾಡಿದ್ದಾರೆ. ದೇಶದ ಭದ್ರತೆ, ಆರ್ಥಿಕ ಪ್ರಗತಿ, ಭ್ರಷ್ಟ ಮುಕ್ತ ಆಡಳಿತ, ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಯೋಜನೆಗಳು, ಅವುಗಳನ್ನು ಕಾರ್ಯರೂಪಕ್ಕೆ ತಂದು ಇಂದು ಭಾರತ ದೇಶವನ್ನು ಬಲಿಷ್ಠ ಮಾಡಿದ್ದು ಇಡೀ ಭಾರತೀಯರು ಹೆಮ್ಮೆ ಪಡೆಬೇಕು ಎಂದು ಹೇಳಿದರು.
ಇನ್ನು ದೇಶ, ಧರ್ಮ, ಸಂಸ್ಕೃತಿ ವಿಚಾರವಾಗಿ ದೇಶ ಕಾಯುವ ಯೋಧನಾಗಿ ಕೆಲಸ ಮಾಡಿದ್ದು, ದೇಶವಾಸಿಗಳ ನೂರಾರು ವರ್ಷದ ಕನಸಾದ ರಾಮ ಮಂದಿರದ ನಿರ್ಮಾಣ, ಬಹುಸಂಖ್ಯಾತರ ರಕ್ಷಣೆ, ಸಾಮಾಜಿಕ, ಧಾರ್ಮಿಕ ಭದ್ರತೆ ನೀಡಿ, ಅನ್ಯರಿಂದ ಆಗುತ್ತಿರುವ ತೊಂದರೆಗಳನ್ನು ತಡೆಹಿಡಿದಿದ್ದು ನಮ್ಮ ಪ್ರಧಾನಿ ಮೋದಿ. ನಮ್ಮ ದೇಶದ ಧೀಮಂತ ಪ್ರಧಾನಿಯವರೂ ಕೂಡಾ ಹಿಂದುಳಿದ ಸಮುದಾಯಕ್ಕೆ ಸೇರಿದ್ದು, ಎಲ್ಲಿಯೂ ಕೂಡಾ ತಾವು ಹಿಂದುಳಿದವರು ಎಂದು ಸೀಮಿತವಾಗಲಿಲ್ಲ, ದೇಶದ ಎಲ್ಲಾ ಜನರ ಅಭಿವೃದ್ಧಿಗಾಗಿ, ದೇಶದ ಸೇವಕನಾಗಿ ದುಡಿದಿದ್ದಾರೆ, ಆಸ್ತಿ ಸಂಪತ್ತು ಮಾಡಲು ಅವರಿಗೆ ಮನೆ, ಮಕ್ಕಳು, ಸಂಬಂಧಗಳು ಇಲ್ಲ. ದೇಶವೇ ಅವರ ಮನೆ ದೇಶದ ಪ್ರಜೆಗಳೇ ಅವರ ಬಂಧುಗಳು, ದೇಶದ ಉದ್ದಾರವೇ ಮೋದಿಜೀ ಅವರ ಕನಸಾಗಿದ್ದು ಅಂತಹ ನಾಯಕರು ನಮ್ಮ ದೇಶಕ್ಕೆ ದೊರಕಿದ್ದು ಭಾರತೀಯರ ಭಾಗ್ಯ ಎಂದು ತಿಳಿಸಿದರು.
ಜನಪ್ರತಿನಿಧಿಯಾಗಿ ಹುಬ್ಬಳ್ಳಿಯನ್ನು ಎಲ್ಲಾ ರೀತಿಯಲ್ಲಿಯೂ ಅಭಿವೃದ್ಧಿ ಮಾಡಿದ್ದೇನೆ. ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಬೆಳಗಾವಿಯನ್ನು ಅಭಿವೃದ್ದಿ ಮಾಡುವೆ ಎಂದು ಪ್ರಮಾಣ ಮಾಡುತ್ತೇನೆ, ಈಗಾಗಲೇ ದಿ. ಸುರೇಶ್ ಅಂಗಡಿ ಹಾಗೂ ಮಂಗಳ ಅಂಗಡಿ ಅವರ ಅವಧಿಯಲ್ಲಿ ರೈಲ್ವೆ ಹಾಗೂ ವೈಮಾನಿಕ ವಲಯಗಳಲ್ಲಿ ಸಾಕಷ್ಟು ಪ್ರಗತಿ ಆಗಿದ್ದು, ಮುಂದೆ ಇಲ್ಲಿ ವಿವಿಧ ಉತ್ಪಾದಕ ವಿದೇಶಿ ಕಂಪನಿಗಳನ್ನು, ಐಟಿ ಉದ್ದಿಮೆಗಳನ್ನು ತಂದು, ಉದ್ಯೋಗ ಸೃಷ್ಟಿಸಿ, ಜಿಲ್ಲೆಯನ್ನು ಅಭಿವೃದ್ಧಿ ದೃಷ್ಟಿಯಲ್ಲಿ ಮಾದರಿ ಜಿಲ್ಲೆಯಾಗಿ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಸದೆ ಮಂಗಲ ಸುರೇಶ ಅಂಗಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಪ್ರಮುಖರಾದ ಪ್ರಕಾಶ ಬಾಳೇಕುಂದ್ರಿ, ಶಂಕರಗೌಡ ಪಾಟೀಲ, ಜಿ.ಎಸ್. ಛಬ್ಬಿ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ಪ್ರತೀಕ ಚಿಟಗಿ