ಬೆಂಗಳೂರು : ಶ್ರೀರಾಮುಲು ನಡುವಿನ ಮುನಿಸಿನ ವಿಚಾರವಾಗಿ ಇಂದು ಜನಾರ್ಧನ ರೆಡ್ಡಿ ಪ್ರತಿಕ್ರಿಯಿಸಿದ್ದು, ತಾಯಿ ಮಗುವಿನ ರೀತಿಯಲ್ಲಿ ಅವನನ್ನು ನಾವು ನೋಡಿಕೊಂಡಿದ್ದೇವೆ. ಆದರೆ ತಾಯಿ ಎದೆ ಹಾಲು ಕುಡಿದು ಎದೆಗೆ ಒದ್ದ ಅನುಭವ ಆಗಿದೆ ಎಂದು ಬೇಸರದಿಂದ ನುಡಿದಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮುಲು ವಿರುದ್ಧ ಕೊಲೆ ಆರೋಪ ಬಂದಾಗ ಆತನ ಜೊತೆ ನಾನು ನಿಂತೆ, ಈ ವೇಳೆ ನನ್ನ ತಾಯಿಯ ಬಳಿ ವಿರೋಧಿ ಗುಂಪುಗಳು ಅವನ ಸಹವಾಸ ಮಾಡದಂತೆ ತಿಳಿ ಹೇಳಿ ಎಂದು ಹೇಳಿದ್ದರು, ಆದರೂ ಕೂಡ ನಾನು ಅವನನ್ನು ಬಿಡದೆ ಆತನೊಂದಿಗೆ ಇದ್ದೆ, ನಾನು ಇರದಿದ್ದರೆ ಶ್ರೀರಾಮುಲು ಕೊಲೆಗಾರನಾಗುತ್ತಿದ್ದ ಎಂದಿದ್ದಾರೆ
ನನ್ನ ಹಾಗೂ ಶ್ರೀರಾಮುಲು ಸ್ನೇಹ ಎಂತಹದ್ದು ಎಂದು ಇಡೀ ಬಳ್ಳಾರಿ ಜನತೆಗೆ ಗೊತ್ತಿದೆ, ನಿಜಕ್ಕೂ ರಾಮುಲು ಇಂತಹ ಹೇಳಿಕೆ ನೀಡುತ್ತಾರೆ ಎಂದು ಅಂದುಕೊಂಡಿರಲಿಲ್ಲ, ಆತನ ಮಾವನ ಕೊಲೆಯ ವೇಳೆ ಆ ರೌಡಿಗಳ ಗುಂಪಿನಲ್ಲಿ ಇವರು ಕೂಡ ಇದ್ದರು, ಅಷ್ಟೇ ಅಲ್ಲದೆ ರಾಘವೇಂದ್ರ ಕೊಲೆ ಆರೋಪ ಕೂಡ ರಾಮುಲು ಮೇಲೆ ಬಂದಿತ್ತು.
ಆಗ ಅವರ ರಕ್ಷಣೆಗೆಂದು ಮಚ್ಚು, ಚಾಕು, ಕೊಡಲಿಗಳನ್ನು ಇಟ್ಟುಕೊಂಡು ಸುತ್ತಾಡುತ್ತಿದ್ದರು, ಅಂತಹ ವ್ಯಕ್ತಿಯನ್ನು ನಮ್ಮ ಜೊತೆ ಸೇರಿಸಿಕೊಂಡು ಆತನಿಗೆ ಒಳ್ಳೆಯ ಮಾರ್ಗದರ್ಶನ ನೀಡಿದ್ದೇವು. ರಾಮುಲು ಪರ ನಾನೇ ಪತ್ರಿಕಾಗೋಷ್ಠಿ ನಡೆಸಿ ಸತ್ಯಾಂಶವನ್ನು ತಿಳಿಸಿದೆ ಎಂದು ಜನಾರ್ಧನ ರೆಡ್ಡಿ ತಿಳಿಸಿದರು.
ಅಂದು ಶ್ರೀರಾಮುಲು ಮಾವನ ಕೊಲೆ ಮಾಡಲು ಸೂರ್ಯನಾರಾಯಣ ರೆಡ್ಡಿ ಫೈನಾನ್ಸ್ ಮಾಡಿದ್ದರು, ಹಾಗೂ ದಿವಾಕರ್ ಬಾಬುನೇ ಕೊಲೆ ಮಾಡಿದ್ದು, ಅಂತ ಎಲ್ಲರಿಗೂ ಗೊತ್ತಿತ್ತು, ಈ ವೇಳೆ ರಾಮುಲು ನಿರಪರಾಧಿ ಎಂದು ಮನವರಿಕೆ ಮಾಡಿದ್ದೆ, ಆದರೆ ಅದೇ ಈಗ ನಮಗೆ ತೊಂದರೆ ಆಯ್ತೇನೋ ಎಂದು ಕಳವಳ ವ್ಯಕ್ತಪಡಿಸಿದರು.
1999 ನೇ ಇಸವಿಯಲ್ಲಿ ಶ್ರೀರಾಮುಲು ಎಂಎಲ್‌ಎ ಟಿಕೆಟ್ ಪಡೆಯುವಾಗ ಕಣ್ಣೀರು ಹಾಕಿದ್ದ. ಅದಕ್ಕೆ ಮುಖ್ಯ ಕಾರಣ ಬಿಜೆಪಿಯ ಸಿಂಬಲ್. ಇದು ಅವರಿಗೆ ನೆನಪು ಇದಿಯೋ ಇಲ್ಲವೋ ಗೊತ್ತಿಲ್ಲ, ನಂಗಂತೂ ತುಂಬಾ ಚೆನ್ನಾಗಿ ನೆನಪಿದೆ, ಈ ವಿಚಾರ ಬಳ್ಳಾರಿ ಜನರಿಗೆ ಕೂಡ ಗೊತ್ತಿಲ್ಲ ಎಂದು ರೆಡ್ಡಿ ಹೇಳಿದರು.
ಅಷ್ಟೇ ಅಲ್ಲದೆ ಸಂಡೂರು ಉಪಚುನಾವಣೆ ವಿಚಾರದಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇನೆ ಅಂತ ಹೇಳಿದ್ದೆ, ಅದರಂತೆ ನಾನು ಸೇರಿದಂತೆ ಪಕ್ಷದ ಎಲ್ಲಾ ನಾಯಕರು ಬಂದು ಪ್ರಚಾರ ಮಾಡಿದ್ದರು, ಆದರೆ ರಾಮುಲು ಮಾತ್ರ ಮೂರು ದಿನ ಕೂಡ ತಡವಾಗಿ ಬಂದು ಪ್ರಚಾರ ನಡೆಸಿದ್ದರು.
ಇದಕ್ಕೆ ಯಾರು ಕೂಡ ಮಾತನಾಡಿಲ್ಲ, ಅಲ್ಲದೇ ಉಪಚುನಾವಣೆಯಲ್ಲಿ ಯಾಕೆ ಸೋಲಾಯಿತು ಎಂದು ಕೂಡ ಎಲ್ಲರಿಗೆ ಗೊತ್ತು, ಈಗ ಅದೇ ವಿಚಾರವನ್ನು ಇಟ್ಟುಕೊಂಡು ಹಗೆ ಸಾಧಿಸುವುದು ತಪ್ಪು, ಕಾಂಗ್ರೆಸ್ ಕೋಟಿ ಕೋಟಿ ಹಣ ಸುರಿದ ಕಾರಣವೇ ಬಿಜೆಪಿ ಸೋತಿದ್ದು ಎಂದು ಜನಾರ್ಧನ ರೆಡ್ಡಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ನಾನೇ ಸ್ವತಃ ಯಡಿಯೂರಪ್ಪ ಅವರಿಗೆ ನನಗೆ ಮಂತ್ರಿಗಿರಿ ಬೇಡ ಶ್ರೀರಾಮುಲು ಗೆ ನೀಡಿ ಎಂದು ಹೇಳಿದ್ದೆ, ನಾನು ಪಕ್ಷದಲ್ಲಿ ಇಲ್ಲದಾಗ, ಬಹಳ ಬೆಳವಣಿಗೆ ನಡೆಯಿತು. ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾಮುಲು ಕಣಕ್ಕಿಳಿದಾಗ, ಹಾಲಿ ಶಾಸಕರ ಕಡೆಯವರು ಚಪ್ಪಲಿ, ಕಲ್ಲು ಹೊಡೆದರು ಆಗ ನಾನೇ ಹೋಗಿ ಸಮಾಧಾನ ಮಾಡಿದ್ದೆ..
ಇಷ್ಟೆಲ್ಲಾ ಮಾಡಿದರೂ ಕೂಡ ಇಂದು ಆತ ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾನೆ, ಎಲ್ಲೋ ತಾಯಿ ಮಗುವಿನ ರೀತಿಯಲ್ಲಿ ಅವನನ್ನು ನಾವು ನೋಡಿಕೊಂಡಿದ್ದೇವೆ. ಆದರೆ ತಾಯಿ ಎದೆ ಹಾಲು ಕುಡಿದು ಎದೆಗೆ ಒದ್ದ ಅನುಭವ ಆಗಿದೆ ಎಂದು ಜನಾರ್ಧನ್ ರೆಡ್ಡಿ ಬೇಸರ ವ್ಯಕ್ತಪಡಿಸಿದರು.



