ತುರುವೇಕೆರೆ: ತಾಲೂಕಿನ ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಾವಾಳದ ಯದುಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕೊಟ್ಟೂರನಕೊಟ್ಟಿಗೆಯ ಜಯಲಕ್ಷ್ಮಮ್ಮಗೋವಿಂದರಾಜ್ ಅವಿರೋಧರಾಗಿ ಆಯ್ಕೆಯಾದರು.

ಕಳೆದ ಕೆಲವು ದಿನಗಳ ಹಿಂದೆ ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಸದಸ್ಯರ ಆಡಳಿತ ಮಂಡಳಿಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ ಸಿದ್ದಲಿಂಗಪ್ಪ ಬಣದ 10 ಮಂದಿ ಹಾಗೂ ಮತ್ತೊಂದು ಬಣದ ಇಬ್ಬರು ಆಯ್ಕೆಯಾಗಿದ್ದರು. ಇಂದು ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹಾವಾಳ ಹೆಚ್.ಎಸ್.ಯದುಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಬಿ.ಜಯಲಕ್ಷ್ಮಮ್ಮ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರಾಗಿ ಹೆಚ್.ಎಸ್.ಯದುಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಎಂ.ಬಿ.ಜಯಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಹಕಾರ ಅಭಿವೃದ್ದಿ ಅಧಿಕಾರಿ, ಚುನಾವಣಾಧಿಕಾರಿ ಡಿ.ಹೆಚ್.ಶ್ರೀನಿವಾಸ್ ಘೋಷಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣೆಯಲ್ಲಿ ಸಂಘದ 12 ಸದಸ್ಯರ ಪೈಕಿ ಇಬ್ಬರು ಗೈರಾಗಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ 10 ಮಂದಿ ಸದಸ್ಯರು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ವರ್ ಉಪಸ್ಥಿತರಿದ್ದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ ಮಾತನಾಡಿ, ಕೊಡಗೀಹಳ್ಳಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಯದುಕುಮಾರ್, ಜಯಲಕ್ಷ್ಮಮ್ಮ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಂಘದ ಈ ಭರ್ಜರಿ ಗೆಲುವಿನ ಜೊತೆಗೆ ಜವಾಬ್ದಾರಿಯೂ ಸಹ ಹೆಚ್ಚಾಗಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಮಾಡಿದ ಜನಪರ, ರೈತಪರ ಸೇವೆ, ಅಭಿವೃದ್ದಿ ಕಾರ್ಯಗಳು ನಮ್ಮ ಗೆಲುವಿಗೆ ಕಾರಣವಾಗಿದೆ. ಕಳೆದ ಬಾರಿ ಚುನಾವಣೆಗೆ ತೆರಳಿದ ಸಂದರ್ಭದಲ್ಲಿ ಸಂಘ 46 ರಿಂದ 50 ಲಕ್ಷದವರೆಗೆ ಸಾಲದಲ್ಲಿತ್ತು. ಈ ಪೈಕಿ ಅರ್ಧದಷ್ಟು ಸಾಲವನ್ನು ತೀರಿಸಿದ್ದೇವೆ. ತುರುವೇಕೆರೆಯಲ್ಲಿ ಸಂಘದ ನಿವೇಶನದ ಸಮಸ್ಯೆ ನ್ಯಾಯಾಲಯದಲ್ಲಿತ್ತು. ಆ ಪ್ರಕರಣವನ್ನು ಪೂರ್ಣಗೊಳಿಸಿದ್ದಲ್ಲದೆ ನಿವೇಶನದಲ್ಲಿ ಹೊಸ ಕಟ್ಟಡ ನಿರ್ಮಿಸಿ ಸಂಘಕ್ಕೆ ಪ್ರತಿ ತಿಂಗಳು 25 ಸಾವಿರ ರೂ ಆದಾಯ ಬರುವಂತೆ ಮಾಡಿದ್ದೇವೆ. ಸಂಘದಿಂದ ಐದೂವರೆ ಕೋಟಿ ಸಾಲ ನೀಡಿದ್ದೇವೆ. ಷೇರುದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ. ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣನವರು, ಸಂಘದ ನಿರ್ದೇಶಕರು, ಷೇರುದಾರರ ಸಹಕಾರದಿಂದ ಇನ್ನೂ ಹೆಚ್ಚಿನ ಅಭಿವೃದ್ದಿಯತ್ತ ಸಂಘವನ್ನು ಕೊಂಡೊಯ್ದು ತಾಲೂಕಿನಲ್ಲೇ ಮಾದರಿ ಸಂಘವನ್ನಾಗಿ ಮಾಡುತ್ತೇವೆಂದರು.

ನೂತನ ಅಧ್ಯಕ್ಷ ಹೆಚ್.ಎಸ್.ಯದುಕುಮಾರ್ ಮಾತನಾಡಿ, ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ ಎಲ್ಲಾ ನಿರ್ದೇಶಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸಂಘದ ಸರ್ವತೋಮುಖ ಅಭಿವೃದ್ದಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿದ್ದಲಿಂಗಪ್ಪನವರ ಪಾತ್ರ ಮಹತ್ವದ್ದಾಗಿದೆ. ಸಂಘದ ಅಧ್ಯಕ್ಷನಾಗಿ ಸಿದ್ದಲಿಂಗಪ್ಪನವರ ಮಾರ್ಗದರ್ಶನದಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ದಿಯತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದರು.
ನೂತನ ಅಧ್ಯಕ್ಷ ಯದುಕುಮಾರ್, ಉಪಾಧ್ಯಕ್ಷೆ ಜಯಲಕ್ಷ್ಮಮ್ಮ ಅವರನ್ನು ಸಂಘದ ನಿರ್ದೇಶಕರಾದ ನಂಜುಂಡಪ್ಪ, ದೇವರಾಜು, ಪುಟ್ಟಸ್ವಾಮಿಗೌಡ, ಚಿಕ್ಕಹನುಮಯ್ಯ, ಮಂಜಮ್ಮ, ವೆಂಕಟೇಶ್, ಶ್ರೀಕೃಷ್ಣ, ಗ್ರಾಪಂ ಪಂಚಾಯ್ತಿ ಅಧ್ಯಕ್ಷ ಕಿರಣ್ ಕುಮಾರ್, ಸದಸ್ಯರಾದ ಶ್ರೀನಿವಾಸ್, ಆದಿತ್ಯ, ರಾಜಲಕ್ಷ್ಮೀರಾಘವೇಂದ್ರ, ಪಪಂ ಸದಸ್ಯ ಟಿ.ಪಿ.ಮಹೇಶ್, ನಾಮಿನಿ ಸದಸ್ಯ ರುದ್ರೇಶ್, ಹಾಲು ಉತ್ಪಾದಕ ಸಂಘದ ನಿರ್ದೇಶಕರಾದ ವೇಣುಗೋಪಾಲ್, ಮಹೇಶ್, ಟೌನ್ ಸಹಕಾರ ಸಂಘದ ನಿರ್ದೇಶಕ ಟಿ.ಎನ್.ಶಿವರಾಜ್, ಮುಖಂಡರಾದ ಮಲ್ಲಾಘಟ್ಟ ರವಿ, ತ್ರೈಲೋಕ್ಯನಾಥ್, ಶಿವಕುಮಾರ್, ಟಿ.ಹೊಸಹಳ್ಳಿ ರಮೇಶ್ ಸೇರಿದಂತೆ ನೂರಾರು ಅಭಿಮಾನಿಗಳು, ಬೆಂಬಲಿಗರು ಅಭಿನಂದನೆ ಸಲ್ಲಿಸಿದರು.
ವರದಿ: ಗಿರೀಶ್ ಕೆ ಭಟ್




