ಚಿಟಗುಪ್ಪ: ಕೇಂದ್ರ ಸರ್ಕಾರದ ಯೋಜನೆ ಹಾಗೂ ಕ್ಷೇತ್ರ ಶಾಸಕ ಡಾ.ಸಿದ್ದು ಪಾಟೀಲ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ತಾಲ್ಲೂಕಿನ ತಾಳಮಡಗಿ (ಗಾಂಧಿನಗರ) ಗ್ರಾಮದ ಯುವ ಮುಖಂಡ ಆನಂದ ಮಾಳಗೆ ಹಾಗೂ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ರುಕ್ಮಿಣಿ ಸೇರಿ ಅನೇಕ ಯುವಕರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ತಾಳಮಡಗಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಸೋಮುವಾರ ಹಮ್ಮಿಕೊಂಡಿದ್ದ ವೇದಿಕೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರಿಗೆ ಶಾಸಕ ಡಾ.ಸಿದ್ದು ಪಾಟೀಲ ಬಿಜೆಪಿ ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು.
ಬಳಿಕ ಮಾತನಾಡಿದ ಶಾಸಕ ಸಿದ್ದು ಪಾಟೀಲ,ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ದುರಾಡಳಿತ,ಅನ್ಯಾಯ ಹಾಗೂ ಅಕ್ರಮಗಳನ್ನು ಸಹಿಸದೆ ಬಿಜೆಪಿ ಪಕ್ಷ ಸೇರ್ಪಡೆ ಆಗುತ್ತಿರುವ ಆನಂದ ಮಾಳಗೆ ಮತ್ತು ಅವರ ಬೆಂಬಲಿಗರಿಗೆ ಸ್ವಾಗತಾರ್ಹವಾಗಿದೆ.
ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ.ಬಿಜೆಪಿ ಶಿಸ್ತಿನ ಪಕ್ಷವಾಗಿದೆ.ಅನ್ಯಾಯ ಅಕ್ರಮ ಯಾವತ್ತೂ ಸಹಿಸುವುದಿಲ್ಲ.
ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಿಂಚಿತ್ತೂ ಚಿಂತೆ ಮಾಡುತ್ತಿಲ್ಲ,ರೈತರು ಸಂಕಷ್ಟದಲ್ಲಿದ್ದಾರೆ,ಶೀಘ್ರದಲ್ಲಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು.ವಿಳಂಬ ನೀತಿ ಅನುಸರಿಸಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಬರುವ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬಲಪಡಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ,ಮಂಡಲ ಅಧ್ಯಕ್ಷ ಅನಿಲ ಪಸಾರ್ಗಿ,ಮಾಜಿ ಸಂಸದ ಭಗವಂತ ಖುಬಾ,ಮಾಜಿ ಶಾಸಕ ಸುಭಾಷ ಕಲ್ಲೂರ,ಅಂಬೇಡ್ಕರ್ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ,ಮಲ್ಲಿಕಾರ್ಜುನ ಕುಂಬಾರ,ಭದ್ರೇಶ ಪಾಟೀಲ,ಗಜೇಂದ್ರ ಕನಕಟರ,ರೇವಣ್ಣಪ್ಪ ಹೂಗಾರ ಸೇರಿ ಬಿಜೆಪಿ ಪಕ್ಷದ ಮುಖಂಡರು,ಕಾರ್ಯಕರ್ತರು ಇದ್ದರು.
ವರದಿ: ಸಜೀಶ ಲಂಬುನೋರ್




