Ad imageAd image

ಪದವಿ ನಂತರ ನವೋದ್ಯಮ ಆರಂಭಿಸಿ, ಉದ್ಯಮಿಗಳಾಗಿ : ನಾಹಿದ ಜಮ್ ಜಮ್

Bharath Vaibhav
ಪದವಿ ನಂತರ ನವೋದ್ಯಮ ಆರಂಭಿಸಿ, ಉದ್ಯಮಿಗಳಾಗಿ : ನಾಹಿದ ಜಮ್ ಜಮ್
WhatsApp Group Join Now
Telegram Group Join Now

—————————————–ಎಸ್.ಬಿ.ಜಿ. ಕಾಲೇಜಿನಲ್ಲಿ ನವಚೈತನ್ಯ ಕಾರ್ಯಕ್ರಮ 

—————————————–ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

ತುರುವೇಕೆರೆ: ವಿದ್ಯಾರ್ಥಿಗಳು ಪದವಿ ನಂತರ ಉದ್ಯೋಗ ಅರಸುವ ಬದಲು ನವೋದ್ಯಮಗಳನ್ನು ಪ್ರಾರಂಭಿಸುವ ಮೂಲಕ ಸ್ವತಃ ಉದ್ಯಮಿಗಳಾಗಿ ನೂರಾರು ಜನರಿಗೆ ಉದ್ಯೋಗ ನೀಡುವಂತಹವರಾಗಬೇಕೆಂದು ತುಮಕೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ವಿಭಾಗದ ಕುಲಸಚಿವೆ ನಾಹಿದ ಜಮ್ ಜಮ್ ತಿಳಿಸಿದರು.

ತಾಲ್ಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ ನಲ್ಲಿರುವ ಎಸ್.ಬಿ.ಜಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಎನ್.ಎಸ್.ಎಸ್. ಘಟಕದ ಉದ್ಘಾಟನೆಯ ಸ್ವಸ್ತಿ ಶುಭಮಸ್ತು, ನವಚೈತನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕೃತಕ ಬುದ್ದಿಮತ್ತೆ (ಎಐ) ಎಲ್ಲೆಡೆ ಹೆಚ್ಚು ಪ್ರಚಾರದಲ್ಲಿದೆ. ಎಐ ಅಭಿವೃದ್ದಿಯ ನಂತರ ಮಾನವ ಸಂಪನ್ಮೂಲಕ್ಕೆ ಕೆಲಸವಿಲ್ಲದಂತಾಗುತ್ತದೆ ಎಂಬ ಭಯ ಪ್ರತಿಯೊಬ್ಬರಲ್ಲೂ ಕಾಣುತ್ತಿದೆ. ಆದರೆ ಮಾನವನ ಹಸ್ತಕೇಪವಿಲ್ಲದೆ ಯಾವುದೇ ಕೃತಕ ಬುದ್ದಿಮತ್ತೆ ಕೆಲಸ ಮಾಡಲು ಸಾಧ್ಯವಿಲ್ಲ. ಕೃತಕ ಬುದ್ದಿಮತ್ತೆ (ಎಐ) ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಎಐ ನಮ್ಮ ಆಳಾಗಿ ಕಾರ್ಯನಿರ್ವಹಿಸಬೇಕೇ ವಿನಃ ನಾವು ಅದರ ಆಳಾಗಬೇಕಿಲ್ಲ ಎಂದರು.

 

 

ಪ್ರಸ್ತುತ ನಾವೆಲ್ಲರೂ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿದ್ದೇವೆ. ಯೋಗ ನಮ್ಮದು, ಎಲ್ಲಾ ರೋಗಗಳನ್ನು ತಡೆಗಟ್ಟಲು ಯೋಗ ಅತ್ಯಮೂಲ್ಯ ಚಿಕಿತ್ಸಾ ಪದ್ದತಿಯಾಗಿದೆ. ನಮ್ಮ ಪೂರ್ವಜರಿಂದ ಕೊಡುಗೆಯಾಗಿ ಬಂದಿರುವ ಯೋಗಕ್ಕೆ ಈಗ ವಿಶ್ವಮಾನ್ಯತೆ ದೊರೆತ ನಂತರ ನಾವು ಯೋಗದಿನವನ್ನು ಆಚರಿಸುತ್ತಿದ್ದೇವೆ. ಸನಾತನ ಪರಂಪರೆ, ಸಂಸ್ಕೃತಿಯಿಂದ ಪ್ರಪಂಚಕ್ಕೆ ಸಾಕಷ್ಟು ಕೊಡುಗೆಯನ್ನು ನಾವು ನೀಡಿದ್ದೇವೆ. ಇಂತಹ ನೆಲದಿಂದ ಬಂದ ನಾವುಗಳು ಮುಂದಿನ ದಿನಗಳಲ್ಲಿ ಸಂಸ್ಕೃತಿ, ಸಂಸ್ಕಾರ, ಮೌಲ್ಯದ ನೆಲೆಗಟ್ಟಿನಲ್ಲಿ ಮತ್ತಷ್ಟು ಹೊಸದನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕಿದೆ ಎಂದ ಅವರು, ವಿದ್ಯಾರ್ಥಿಗಳು ಸ್ವಂತ ಉದ್ಯಮಿಗಳಾಗುವ ನಿಟ್ಟಿನಲ್ಲಿ ನವೋದ್ಯಮ ಪ್ರಾರಂಭಿಸುವ ಕನಸನ್ನು ವಿದ್ಯಾರ್ಥಿ ದೆಸೆಯಿಂದಲೇ ಕಾಣಬೇಕಿದೆ. ಬಿಕಾಂ, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಹೊಸದನ್ನು ಆವಿಷ್ಕರಿಸಿ ಆ ಮೂಲಕ ಸಮಾಜಕ್ಕೆ ನೆರವಾಗಬೇಕಿದೆ ಎಂದರು.

ಸ್ವಾಮಿ ವಿವೇಕಾನಂದ ಪಪೂ ಕಾಲೇಜಿನ ಉಪನ್ಯಾಸಕ ಪ್ರಕಾಶ್ ಮಾತನಾಡಿ, ಮಠಮಾನ್ಯಗಳಲ್ಲಿ ಆದರ್ಶನೀಯ, ಸಂಸ್ಕಾರಯುತ, ಮೌಲ್ಯಯುತ, ಅಂತಃಕರಣ ಭಾವವನ್ನು ಬಡಿದೆಬ್ಬಿಸುವಂತಹ ಶಿಕ್ಷಣ ದೊರೆಯುತ್ತಿದೆ. ಮಾನವೀಯ ಅಂತಃಕರಣ ಕಲಕುವ ಮೌಲ್ಯಯುತ ಶಿಕ್ಷಣವನ್ನು ವಿದ್ಯಾರ್ಥಿಗಳು ಕಲಿಯದಿದ್ದರೆ ವಿದ್ಯೆ ನಿರರ್ಥಕವಾಗುತ್ತದೆ. ಅಧ್ಯಯನದ ಹಾದಿಯಲ್ಲಿ ಎಷ್ಟೇ ಸಮಸ್ಯೆ, ಸಂದಿಗ್ಧ ಪರಿಸ್ಥಿತಿಗಳಿದ್ದರೂ ಅದನ್ನು ಎದುರಿಸಿ ಗುರುಗಳ ಮಾರ್ಗದರ್ಶನದಲ್ಲಿ ಗುರಿಯೆಡೆಗೆ ಸಾಗಿದಲ್ಲಿ ಯಶಸ್ಸು ನಿಮ್ಮದಾಗುತ್ತದೆ ಎಂದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು. ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಬೀಳ್ಕೊಡುಗೆ ನೀಡಲಾಯಿತು. ಕೃಷಿ ವಿಜ್ಞಾನ ಕಾಲೇಜಿನ ಡೀನ್ ಡಾ.ಎನ್.ಎಸ್.ಶಿವಲಿಂಗೇಗೌಡ, ಎಸ್.ಬಿ.ಜಿ. ಕಾಲೇಜಿನ ಪ್ರಾಂಶುಪಾಲ ಡಾ||ಎ.ಬಿ. ಚಂದ್ರಶೇಖರ್, ಎಸ್.ಬಿ.ವಿದ್ಯಾಲಯದ ಪ್ರಾಂಶುಪಾಲ ಗಿರೀಶ್, ಸಿಇಒ ಚಂದ್ರೇಗೌಡ, ಪ್ರೊ.ಪುಟ್ಟರಂಗಪ್ಪ, ಉಪನ್ಯಾಸಕರಾದ ಸೈಯದ್ ರಹಮತುಲ್ಲಾ, ಕುಸುಮ, ಅಖಿಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪವಿತ್ರ ಪ್ರಾರ್ಥಿಸಿ, ಭವ್ಯ, ಅಂಬುಜ ನಿರೂಪಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!