ಕರ್ನಾಟಕದ ಹಿತಾಸಕ್ತಿಗಳನ್ನು ಕಡೆಗಣಿಸಿದ ಒಕ್ಕೂಟ ಸರ್ಕಾರದಾರಿ ಕಾಣದ,ಸ್ಪಷ್ಟತೆಯಿಲ್ಲದ, ಹಳೆಯದನ್ನು ಹೊಸದೆಂದು ಬಿಂಬಿಸುವ ಪ್ರಯತ್ನವಾಗಿದೆ.
ಒಕ್ಕೂಟ ಸರ್ಕಾರದ ಆಯವ್ಯಯವು ರಾಜ್ಯದ ಜನತೆಗೆ ಸಂಪೂರ್ಣವಾಗಿ ನಿರಾಶದಾಯಕವಾಗಿದೆ ಮತ್ತು ಒಟ್ಟಾರೆಯಾಗಿ ಒಂದು ಸಾಮಾನ್ಯ ಬಜೆಟ್.ಇಡೀ ವಿಶ್ವವೇ ಗೊಂದಲಮಯ ವಾತಾವರಣದಲ್ಲಿ ಮುಳುಗಿರುವಂತಹ ಸಂದರ್ಭದಲ್ಲಿ,ದೇಶವನ್ನು ಮುನ್ನೆಡೆಸುವ ಹಾಗೂ ರಕ್ಷಿಸುವ ಯಾವುದೇ ಕ್ರಮಗಳು ಕಂಡುಬರುತ್ತಿಲ್ಲ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಪತ್ರಿಕೆ ಹೇಳಿಕೆಯನ್ನು ನೀಡಿ ಮಾತನಾಡಿದರು.
ಸಂಕಷ್ಟದ ಸಂದರ್ಭದಲ್ಲಿ, ಸ್ಪಷ್ಟ ಹಾಗು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ, ಆದರೆ ಯಾವುದೇ ಸ್ಪಷ್ಟತೆಯಿಲ್ಲದ ಮೇಲ್ಸ್ತರದಲ್ಲಿನ ಘೋಷಣೆಗಳಂತೆ ಬಹುತೇಕ ಕಂಡುಬರುತ್ತಿದ್ದು, ರೈತರ ಆದಾಯ ಹೆಚ್ಚಿಸುವ ಬಗ್ಗೆ ಹಾಗು ಯುವ ಶಕ್ತಿಯ ಬಗ್ಗೆ ಮಾತನಾಡಲಾಗಿದೆ, ಆದರೆ ಉದ್ಯೋಗ ಸೃಷ್ಟಿಯ ಬಗ್ಗೆಯಾಗಲಿ ಅಥವಾ ರೈತರ ಸಮಸ್ಯೆ ಬಗೆಹರಿಸಲು ಯಾವುದೇ ನಿರ್ಧಿಷ್ಟ ಕ್ರಮಗಳು ಕಂಡುಬರುತ್ತಿಲ್ಲ. ಈ ಹಿಂದಿನ ಅನೇಕ ಘೋಷಣೆಗಳು ಕೇವಲ ಘೋಷಣೆಗಳಾಗಿ ಮಾತ್ರ ಉಳಿದಿವೆ. ಘೋಷಣೆಗಳನ್ನು ಕಾರ್ಯಗತ ಮಾಡಲು ಸಂಪೂರ್ಣ ನಿರ್ಲಕ್ಷ ವಹಿಸಲಾಗಿದೆ. ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತಹ ರೀತಿಯಲ್ಲಿ ಬಜೆಟ್ ಇದ್ದು, ರಾಜ್ಯದ ಜನರ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿಗೊಳಿಸಿದ್ದು, ಕರ್ನಾಟಕವನ್ನು ಎಂದಿನಂತೆ ನಿರ್ಲಕ್ಷಿಸಲಾಗಿದೆ.
ಒಕ್ಕೂಟ ಹಣಕಾಸು ಸಚಿವರು ಮಂಡಿಸಿರುವ 2026ರ ಆಯವ್ಯಯವನ್ನು ಕೆಆರ್ಎಸ್ ಪಕ್ಷ ಗಂಭೀರವಾಗಿ ಪರಿಶೀಲಿಸಿದ್ದು, ಈ ಬಜೆಟ್ನಲ್ಲಿ ಕರ್ನಾಟಕ ರಾಜ್ಯದ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಅಗತ್ಯಗಳಿಗೆ ಬೇಕಾದಷ್ಟು ಪ್ರಾಮುಖ್ಯತೆ ನೀಡಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ. “ವಿಕಸಿತ ಭಾರತ”ಎಂಬ ಘೋಷಣೆಯ ಹಿಂದೆ ನಿಜವಾದ ಪ್ರಾದೇಶಿಕ ನ್ಯಾಯ ಮರೆಯಾಗುತ್ತಿರುವುದನ್ನು ಈ ಬಜೆಟ್ ಬಹಿರಂಗಪಡಿಸಿದೆ.
ಕೇಂದ್ರ ಸರ್ಕಾರ ಘೋಷಿಸಿರುವ 7 ಹೈ-ಸ್ಪೀಡ್ ರೈಲು ಮಾರ್ಗಗಳನ್ನು “ಸಿಟಿ ಕನೆಕ್ಟಿವಿಟಿ”ಹೆಸರಿನಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೆ ಪುಣೆ–ಹೈದರಾಬಾದ್, ಹೈದರಾಬಾದ್–ಬೆಂಗಳೂರು, ಚೆನ್ನೈ–ಬೆಂಗಳೂರು ಮುಂತಾದ ಮಾರ್ಗಗಳು ಕರ್ನಾಟಕಕ್ಕೆ ಮೂಲಭೂತವಾಗಿ ಹೊಸ ಸಂಪರ್ಕವನ್ನು ಕಲ್ಪಿಸುವುದಿಲ್ಲ. ಈಗಾಗಲೇ ಇರುವ ಸಂಪರ್ಕಗಳನ್ನು ಹೈ-ಸ್ಪೀಡ್ ಎಂಬ ಹೆಸರಿನಲ್ಲಿ ಮರುಪ್ಯಾಕೇಜಿಂಗ್ ಮಾಡುವುದರಿಂದ ಕರ್ನಾಟಕದ ಒಳನಾಡು ಪ್ರದೇಶಗಳು, ಉತ್ತರ ಕರ್ನಾಟಕ ಹಾಗೂ ಹಿಂದುಳಿದ ಜಿಲ್ಲೆಗಳ ಜನರಿಗೆ ಯಾವುದೇ ಮಹತ್ತರ ಲಾಭವಾಗುವುದಿಲ್ಲ. ರಾಜ್ಯದೊಳಗಿನ ನಗರ–ಗ್ರಾಮ ಸಂಪರ್ಕ ಸುಧಾರಣೆ ಅಥವಾ ಹೊಸ ರೈಲು ಮಾರ್ಗಗಳಿಗೆ ಬಜೆಟ್ನಲ್ಲಿ ಸೂಕ್ತ ಪ್ರಾಮುಖ್ಯತೆ ಸಿಗದೆ ಇರುವುದು ನಿರಾಶಾಜನಕವಾಗಿದೆ ಎಂದು ತಿಳಿಸಿದರು.
ವರದಿ :ರಾಜು ಮುಂಡೆ




