ನವದೆಹಲಿ: ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಹಿತದೃಷ್ಟಿಯಿಂದ ಕಬ್ಬಿನ ರಿಕವರಿ ದರವನ್ನು ಶೇ. 10.25 ರಿಂದ ಶೇ. 9.5 ಕ್ಕೆ ಇಳಿಸಬೇಕು ಮತ್ತು ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಹೆಚ್ಚಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಬಿ. ಕಡಾಡಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕರ್ನಾಟಕದಲ್ಲಿ ಕಬ್ಬಿನ ರಿಕವರಿ ದರ ಶೇ. 9.5 ರಷ್ಟಿದ್ದರೂ, ಎಫ್ಆರ್ಪಿಯನ್ನು ಶೇ. 10.25 ರ ದರದಲ್ಲಿ ನಿಗದಿಪಡಿಸಲಾಗಿದೆ. ಇದರಿಂದ ರೈತರಿಗೆ ಮತ್ತು ಗಿರಣಿಗಳಿಗೆ ತೊಂದರೆಯಾಗುತ್ತಿದೆ ಎಂದರು.
2019 ರಿಂದ ಸಕ್ಕರೆ ಕನಿಷ್ಠ ಮಾರಾಟ ಬೆಲೆಯನ್ನು ಕೆಜಿಗೆ ಕೇವಲ 31ರೂ.ಗೆ ಇರಿಸಲಾಗಿದ್ದು, ಅದನ್ನು ಹೆಚ್ಚಿಸಲಾಗಿಲ್ಲ. ಇದರಿಂದಾಗಿ, ಸಕ್ಕರೆ ಕಾರ್ಖಾನೆಗಳು ರೈತರಿಗೆ ಹೆಚ್ಚಿನ ಹಣವನ್ನು ನೀಡಲು ಹಿಂಜರಿಯುತ್ತಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 40ರೂ.ಕ್ಕೆ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಎಂಎಸ್ಪಿ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಹೇಳಿದರು.




