ತುರುವೇಕೆರೆ : ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಕಡೇಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಲಾಗುತ್ತಿದ್ದ ಸಮುದಾಯ ಭವನ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ.

ಕಡೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಅಧಿದೇವತೆಯಾದ ಶ್ರೀ ರಂಗನಾಥ ಸ್ವಾಮಿ ದೇವರು ನೆಲೆಸಿರುವ ಈ ಬೆಟ್ಟವನ್ನು ಕಡೇಹಳ್ಳಿ ಗುಡ್ಡ ಎಂದೇ ಪ್ರಸಿದ್ದಿಯಾಗಿದೆ. ಈ ಬೆಟ್ಟದಲ್ಲಿರುವ ಶ್ರೀ ರಂಗನಾಥಸ್ವಾಮಿಯನ್ನು ಕಾಣಲು ತಾಲೂಕಿನ ವಿವಿಧ ಗ್ರಾಮಗಳಿಂದ ಮಾತ್ರವಲ್ಲದೆ ಪರಸ್ಥಳದಿಂದಲೂ ಭಕ್ತಾಧಿಗಳು ಬರುತ್ತಾರೆ. ವೈಕುಂಠ ಏಕಾದಶಿ ಸೇರಿದಂತೆ ಹಬ್ಬಹರಿದಿನಗಳಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಕಡೇಹಳ್ಳಿ ಗ್ರಾಮದ ಯಾವುದೇ ಕುಟುಂಬದಲ್ಲಿ ಶುಭಕಾರ್ಯ ನಡೆದರೂ ಮೊದಲ ಪೂಜೆ ಶ್ರೀ ರಂಗನಾಥಸ್ವಾಮಿಗೆ ಸಲ್ಲಿಸುವುದು ವಾಡಿಕೆಯಾಗಿದೆ. ಇಷ್ಟೊಂದು ಮಹತ್ವವಿರುವ ಶ್ರೀ ರಂಗನಾಥ ಸ್ವಾಮಿ ಬೆಟ್ಟವು ಭೂಮಿಯಿಂದ ಸಾವಿರಾರು ಅಡಿ ಎತ್ತರದಲ್ಲಿದ್ದು, ಬೆಟ್ಟದ ಮೇಲಿಂದ ಸುತ್ತಲೂ ನೋಡಿದರೆ ಸುಂದರ ಪ್ರಕೃತಿಯ ಸೊಬಗು ಕಾಣಿಸುತ್ತದೆ. ರಮ್ಯರಮಣೀಯ ಪ್ರಕೃತಿಯ ಪರಿಸರದಲ್ಲಿ ಸ್ವಾಮಿಯು ನೆಲೆಸಿದ್ದಾನೆ.
ಈ ಬೆಟ್ಟದಲ್ಲಿರುವ ರಂಗನಾಥ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಲು ಬರುವ ಭಕ್ತಾಧಿಗಳಿಗೆ ಹಾಗೂ ಅನ್ನದಾಸೋಹಕ್ಕೆ ಅನುಕೂಲವಾಗಲೆಂದು 2019-20 ನೇ ಸಾಲಿನಲ್ಲಿ ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಅನುದಾನದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಅಂದು ಶಾಸಕರಾಗಿದ್ದ ಮಸಾಲಾ ಜಯರಾಮ್ ಅವರು ಮೂರು ಲಕ್ಷ ರೂಗಳ ಅನುದಾನವನ್ನು ಒದಗಿಸಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.
ದೊಡ್ಡ ಮಟ್ಟದಲ್ಲಿ ಸಮುದಾಯ ಭವನ ನಿರ್ಮಾಣದ ಯೋಜನೆ ಇದಾಗಿರುವ ಕಾರಣ ಸುಮಾರು 12 ಪಿಲ್ಲರ್ ಗಳನ್ನು ಹೊಂದಿ ಮೇಲ್ಛಾವಣಿ ಹಾಕಲಾಗಿದೆ. ಆದರೆ ಮುಂದುವರೆದ ಕಾಮಗಾರಿಗೆ ಅನುದಾನ ಬಿಡುಗಡೆಯಾಗದೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಭವನ ದೊಡ್ಡ ಮಟ್ಟದ್ದಾಗಿರುವುದರಿಂದ ಬೇರೆ ಅನುದಾನವೂ ಭವನಕ್ಕೆ ದೊರೆತಿರಬಹುದು ಎನ್ನಲಾಗಿದೆ.
ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅರ್ಧಕ್ಕೆ ನಿಂತಿರುವ ಸಮುದಾಯ ಭವನಕ್ಕೆ ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಳಿಸಬೇಕು. ಆ ಮೂಲಕ ಶ್ರೀ ರಂಗನಾಥ ಸ್ವಾಮಿ ಬೆಟ್ಟಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.
ವರದಿ: ಗಿರೀಶ್ ಕೆ ಭಟ್




