ತುಂಗಭದ್ರಾ ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ತುಂಗಭದ್ರಾ : ಜಲಾಶಯದಿಂದ ನದಿಗೆ 90 ಸಾವಿರ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಸಿದ ಪರಿಣಾಮ, ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಬಳಿ ಇರುವ ಕಂಪ್ಲಿ ಸೇತುವೆ ಮೇಲಿನ ಸಂಚಾರ ನಿಷೇಧ ಮಾಡಿ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.
ಲೋಕೋಪಯೋಗಿ ಇಲಾಖೆಯ ಗಂಗಾವತಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಶ್ವನಾಥ್ ಈ ಆದೇಶ ಹೊರಡಿಸಿದ್ದು, ನದಿಯಲ್ಲಿ ಪ್ರವಾಹದ ಸನ್ನಿವೇಶ ನಿರ್ಮಾಣವಾಗಿದೆ. ಹೀಗಾಗಿ ಸೇತುವೆ ಮೇಲಿನ ವಾಹನ ಮತ್ತು ಜನ ಸಂಚಾರ ನಿಷೇಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಮತ್ತು ಪೊಲೀಸ್ ಇಲಾಖೆಗೆ ಪ್ರತಿಗಳನ್ನು ರವಾನಿಸಿದ್ದಾರೆ.
ಕಂಪ್ಲಿ- ಗಂಗಾವತಿ ಜನರ ಪರದಾಟ:ಕಂಪ್ಲಿ ಮತ್ತು ಗಂಗಾವತಿ ಆಡಳಿತಾತ್ಮಕವಾಗಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗೆ ಸೇರಿವೆಯಾದರೂ, ಭೌಗೋಳಿಕವಾಗಿ ಎರಡು ತಾಲೂಕಿನ ಗಡಿಗಳು ಕೇವಲ ಒಂದು ಕಿಲೋ ಮೀಟರ್ ಅಂತರದಲ್ಲಿವೆ. ಚಿಕ್ಕಜಂತಕಲ್-ಕಂಪ್ಲಿ ಬಳಿ ಇರುವ ಸುಮಾರು ಒಂದು ಕಿಲೋ ಮೀಟರ್ ಉದ್ದದ ಸೇತುವೆಯೇ ಈ ಎರಡೂ ತಾಲೂಕನ್ನು ವಿಭಜಿಸಿದೆ.
ಕಂಪ್ಲಿಯ ಬಹುತೇಕ ಜನ ಶಿಕ್ಷಣ, ಆರೋಗ್ಯ, ತರಕಾರಿ, ಹಣ್ಣು, ಕಿರಾಣಿ, ಕಬ್ಬಿಣ ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿಯಂತ ಕಾರಣಕ್ಕೆ ಗಂಗಾವತಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಇದೀಗ ಕಂಪ್ಲಿ ಸೇತುವೆ ಮುಳುಗಡೆಯಾದರೆ, ಜನ ಇನ್ನಿಲ್ಲದಂತೆ ಪರದಾಡುವ ಸನ್ನಿವೇಶ ನಿರ್ಮಾಣವಾಗಲಿದೆ.
ಕೇವಲ ಒಂದು ಕಿಲೋ ಮೀಟರ್ ಅಂತರದಲ್ಲಿರುವ ಗಂಗಾವತಿ ತಾಲೂಕಿನ ಗಡಿಗೆ ಬರಲು, ಸುತ್ತು ಬಳಸಿ ಬುಕ್ಕಸಾಗರ, ಕಡೇಬಾಗಿಲು ಸೇತುವೆ ದಾಟಿ ಸುಮಾರು 20 ಕಿಲೋ ಮೀಟರ್ ಸುತ್ತು ಬಳಸಿ ಗಂಗಾವತಿಗೆ ಬರಬೇಕಾದ ಸ್ಥಿತಿ ಇದೆ. ಮುಖ್ಯವಾಗಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಇದು ಸಮಸ್ಯೆಯಾಗಿದೆ.
ಗ್ರಾಮಗಳಲ್ಲಿ ಡಂಗೂರ :ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿರುವ ಹಿನ್ನೆಲೆ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಯ ಸನಿಹಕ್ಕೆ ಹೋಗದಂತೆ ನದಿಪಾತ್ರದ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳಿಂದ ಡಂಗುರ ಸಾರಲಾಗುತ್ತಿದೆ.




