ಬಾಗಲಕೋಟೆ: ಅನಾರೋಗ್ಯ ಸಮಸ್ಯೆಯಿಂದ 13 ತಿಂಗಳ ಮಗು ಸಾವನ್ನಪ್ಪಿದೆ ಎಂದು ಪೋಷಕರು ಮಗುವಿನ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಕಂದಮ್ಮ ಕೆಮ್ಮಿದ ವಿಚಿತ್ರ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ನಡೆದಿದೆ.
ನೀಲಮ್ಮ-ಬಸವರಾಜ್ ಭಜಂತ್ರಿ ದಂಪತಿಯ 13 ತಿಂಗಳ ಮಗು ಉಸಿರಾಟದ ತೊಂದರೆ ಹಾಗೂ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿತ್ತು.
ನಾಲ್ಕೈದು ದಿನಗಳ ಹಿಂದೆ ಮಗುವನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗು ಬದುಕುವುದು ಕಷ್ಟ ಎಂದಿದ್ದರು.
ಹಾಗಾಗಿ ಪೋಷಕರು ಮಗುವನ್ನು ವಾಪಾಸ್ ಮನೆಗೆ ಕರೆತರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಮಗು ಪ್ರಜ್ಞೆ ತಪ್ಪಿದೆ. ಪ್ರಜ್ಞೆ ತಪ್ಪಿದ ಮಗು ಮೃತಪಟ್ಟಿದೆ ಎಂದು ಕುಟುಂಬದವರು ತಪ್ಪಾಗಿ ಭಾವಿಸಿದ್ದಾರೆ.
ಸಂಬಂಧಿಕರಿಗೂ ಮಗು ಮೃತಪಟ್ಟಿದೆ ಎಂದು ವಿಷಯ ತಿಳಿಸಿದ್ದಾರೆ. ಕಣ್ಣೀರಲ್ಲೇ ಮನೆಗೆ ಬಂದ ಪೋಷಕರು ಅಂತ್ಯಸಂಸ್ಕಾರಕ್ಕೆ ಸಿದ್ಧತೆಯನ್ನು ನಡೆಸಿದ್ದಾರೆ.
ಅಂತ್ಯಸಂಸ್ಕಾರದ ವೇಳೆ ಅಂತಿಮ ವಿಧಿ-ವಿಧಾನ ನೆರವೇರಿಸುತ್ತಿದ್ದಂತೆ ಮಗು ಇದ್ದಕ್ಕಿದ್ದಂತೆ ಕೆಮ್ಮಲಾರಂಭಿಸಿದೆ. ಮಗು ಸಾವನ್ನಪ್ಪಿದೆ ಎಂದು ಕಣ್ಣೀರಿಟ್ಟಿದ್ದ ಪೋಷಕರಿಗೆ ಮಗು ಬದುಕಿ ಬಂದಿರುವುದು ನೋಡಿ ಸಂತಸಕ್ಕೆ ಪಾರವೇ ಇಲ್ಲ ಎಂಬಂತಾಗಿದೆ.
ಸಂಬಂಧಿಕರಲ್ಲಿಯೂ ಅಚ್ಚರಿ. ಇದು ಮುರ್ತುಜಾ ಖಾದ್ರಿ ಪವಾಡ ಎಂದು ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಮಗುವನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.