ಬೆಂಗಳೂರು: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಗಾಗ ತಗಾದೆ ತೆಗೆಯುತ್ತಿರುವ ಮರಾಠಿ ಸಂಘಟನೆಗಳ ವಿರುದ್ಧ ಮಾರ್ಚ್ 22ರಂದು ಕರ್ನಾಟಕ ಬಂದ್ ಮಾಡುವ ಮೂಲಕ ಎಚ್ಚರಿಕೆ ನೀಡಲು ಕನ್ನಡ ಪರ ಸಂಘಟನೆಗಳು ಸಜ್ಜಾಗಿವೆ.
ಮಾರ್ಚ್ 22ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ರಾಜ್ಯಾದ್ಯಂತ ಬಂದ್ ಆಚರಿಸಲು ಉದ್ದೇಶಿಸಲಾಗಿದೆ. ಮತ್ತು ಈ ಬಂದ್‌ಗೆ ಬೆಂಬಲ ನೀಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಬಂದ್ ಬಿಸಿ ತಟ್ಟುವುದು ಖಚಿತವಾಗಿದೆ. ಬಂದ್ ಸಂದರ್ಭದಲ್ಲಿ ಸಾರಿಗೆ ಸೇವೆಗಳಾದ ಬಸ್, ಆಟೋ, ಮತ್ತಿತರ ವಾಹನಗಳ ಸಂಚಾರ ನಡೆಸದಂತೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ.
ಬಂದ್ಗೆ ಬೆಂಬಲ ನೀಡಿರುವ ಸಂಘಟನೆಗಳು: ಬಂದ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ ಬೆಂಬಲ ಸೂಚಿಸಿದೆ. ಹೊಟೇಲ್ ಮಾಲೀಕರ ಸಂಘ ನೈತಿಕ ಬೆಂಬಲ ಮಾತ್ರ ಘೋಷಿಸಿದೆ. ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ ಬಂದ್ಗೆ ಬೆಂಬಲ ನೀಡುವ ಭರವಸೆ ನೀಡಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘದಿಂದ ಕೂಡ ಬೆಂಬಲ ವ್ಯಕ್ತವಾಗಿದೆ. ಉಳಿದಂತೆ ಓಲಾ, ಉಬರ್ ಅಸೋಸಿಯೋಷನ್, ಎಪಿಎಂಸಿ ಸೇರಿ ಕೆಲ ಸಂಘಟನೆಗಳು ಬಂದ್ಗೆ ಬೆಂಬಲ ನೀಡಲು ಸಜ್ಜಾಗಿವೆ.
ಏನಿರುತ್ತೆ? ಏನಿರಲ್ಲ?: ಸಿನಿಮಾ ಥಿಯೇಟರ್, ಚಲನಚಿತ್ರ ವಾಣಿಜ್ಯ ಮಂಡಳಿ, ಶಾಪಿಂಗ್ ಮಾಲ್‌ಗಳು, ಬೇಕರಿ, ಬಾರ್ ಅಂಡ್ ರೆಸ್ಟೋರೆಂಟ್, ಅಂಗಡಿ, ಬೀದಿಬದಿ ವ್ಯಾಪಾರಿಗಳಿಂದ ಬಂದ್ಗೆ ಭಾಗಶಃ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಈ ಸೇವೆ ಅಲಭ್ಯವಾಗುವ ಸಾಧ್ಯತೆ ಇದೆ. ಮೆಟ್ರೋ ಸೇವೆಯ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ. ಆಸ್ಪತ್ರೆ, ವೈದ್ಯಕೀಯ ಸೇವೆ, ಹಾಲು, ಅಗತ್ಯ ವಸ್ತುಗಳ ಮಾರಾಟ ಎಂದಿನಂತಿರಲಿದೆ.
ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವಂತಿಲ್ಲ: ಬೆಂಗಳೂರಿನಲ್ಲಿ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವಂತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಅಗತ್ಯ ಪೂರ್ವ ಸಿದ್ಧತೆಗಳನ್ನ ಪೊಲೀಸ್ ಇಲಾಖೆ ಮಾಡಿಕೊಂಡಿದ್ದು, ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಲು ಮುಂದಾದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಬಂದ್ಗೆ ಬೆಂಬಲ ಸೂಚಿಸಿರುವ ಸಂಘಟನೆಗಳ ಮುಖಂಡರನ್ನು ಕರೆಸಿ ಮಾತನಾಡಲಾಗಿದ್ದು, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಗಳಾದರೆ ಸಂಘಟನೆಗಳೇ ಜವಾಬ್ದಾರಿಯಾಗಲಿವೆ ಎಂದು ಆಯುಕ್ತರು ತಿಳಿಸಿದ್ದಾರೆ.