ಅಹಮದಾಬಾದ್: ಐಪಿಎಲ್ ಟೂರ್ನಿಯ ಒಂಬತ್ತನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವಿನ ನಗೆ ಬೀರಿದೆ. ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಗೆ ಇದು ಎರಡನೇ ಸೋಲಾಗಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 196 ರನ್ ಗಳಿಸಿದೆ. ಕೊನೆಯ 3 ಓವರ್‌ಗಳಲ್ಲಿ ಮುಂಬೈ ತಂಡವು ಬಲಿಷ್ಠ ಆಟ ಪ್ರದರ್ಶಿಸಿ ಗುಜರಾತ್ ತಂಡವನ್ನು 200 ಕ್ಕಿಂತ ಕಡಿಮೆ ಸ್ಕೋರ್‌ಗೆ ಸೀಮಿತಗೊಳಿಸಿತು. ಟೈಟಾನ್ಸ್ ನೀಡಿದ 197 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಆರಂಭ ಹಿನ್ನಡೆ ಅನುಭವಿಸಿತು. ರೋಹಿತ್ ಶರ್ಮಾ 8 ರನ್ಗಳಿಗೆ ಔಟಾದರೇ ರಯಾನ್ ರಿಸ್ಕೆಲ್ಟನ್ 6 ರನ್ ಗೆ ಔಟಾಗಿ ಪೆವಿಲಿಯನ್ ಸೇರಿದರು. ತಿಲಕ್ ವರ್ಮಾ 39 ಹಾಗೂ ಸೂರ್ಯಕುಮಾರ್ ಯಾದವ್ 48 ರನ್ ಗಳಿಸಿದ್ದರು. ಆದರೆ ಪಂದ್ಯ ಗೆಲ್ಲಲು ನೆರವಾಗಲಿಲ್ಲ. ಇನ್ನುಳಿದ ಬ್ಯಾಟರ್ ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ನಿಗದಿತ ಓವರ್ ನಲ್ಲಿ 160 ರನ್ ಗಳಿಸಲಷ್ಟೇ ಶಕ್ತವಾಯಿತು.
ಗುಜರಾತ್ ಪರ ಅತ್ಯಧಿಕ ಸ್ಕೋರ್ ಗಳಿಸಿದ್ದು ಸಾಯಿ ಸುದರ್ಶನ್ 63 ರನ್‌ಗಳ ಇನ್ನಿಂಗ್ಸ್ ಆಡಿದರು. ಪವರ್‌ಪ್ಲೇನಲ್ಲಿಯೇ ಜಿಟಿ ವಿಕೆಟ್ ಕಳೆದುಕೊಳ್ಳದೆ 66 ರನ್ ಗಳಿಸುವುದರೊಂದಿಗೆ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮುಂಬೈ ತಂಡದ ನಿರ್ಧಾರ ತಪ್ಪು ಎಂದು ಆರಂಭದಲ್ಲಿ ಸಾಬೀತುಪಡಿಸಿದರು. 38 ರನ್ ಗಳಿಸಿದ್ದ ಗಿಲ್ ಅವರನ್ನು ಹಾರ್ದಿಕ್ ಪಾಂಡ್ಯ ಔಟ್ ಮಾಡಿದರು. ಗಿಲ್ ಜೊತೆಗೆ ಜೋಸ್ ಬಟ್ಲರ್ ಕೂಡ 24 ಎಸೆತಗಳಲ್ಲಿ 39 ರನ್ ಗಳಿಸಿ ಔಟಾದರು.
17 ಓವರ್‌ಗಳಲ್ಲಿ ಗುಜರಾತ್ ಟೈಟಾನ್ಸ್ ಸ್ಕೋರ್ 3 ವಿಕೆಟ್ ನಷ್ಟಕ್ಕೆ 170 ರನ್ ಆಗಿತ್ತು. ಆದರೆ ಆ ನಂತರ ಗುಜರಾತ್ ಬ್ಯಾಟ್ಸ್‌ಮನ್‌ಗಳು 3 ಓವರ್‌ಗಳಲ್ಲಿ ಕೇವಲ 26 ರನ್ ಗಳಿಸಲು ಸಾಧ್ಯವಾಯಿತು. ಕೊನೆಯ 18 ಎಸೆತಗಳಲ್ಲಿ ತಂಡವು ಒಟ್ಟು 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯ 3 ಓವರ್‌ಗಳಲ್ಲಿ ಗುಜರಾತ್ ತಂಡವು ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಶೆರ್ಫಾನ್ ರುದರ್ಫೋರ್ಡ್, ರಶೀದ್ ಖಾನ್ ಮತ್ತು ಸಾಯಿ ಕಿಶೋರ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಗುಜರಾತ್ ತಂಡದ ಇನ್ನಿಂಗ್ಸ್‌ನಲ್ಲಿ ಒಟ್ಟು 10 ಆಟಗಾರರು ಬ್ಯಾಟಿಂಗ್ ಮಾಡಲು ಬಂದರು. ತಂಡದ ಕೊನೆಯ ಆರು ಬ್ಯಾಟ್ಸ್‌ಮನ್‌ಗಳಲ್ಲಿ ಐವರು ಎರಡಂಕಿಯ ಗಡಿ ಮುಟ್ಟಲು ಸಹ ಸಾಧ್ಯವಾಗಲಿಲ್ಲ.
ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ. ಅವರ ನಾಯಕತ್ವದಲ್ಲಿ, ಮುಂಬೈ ಬೌಲಿಂಗ್ ಬಲವನ್ನು ತೋರಿಸಿದೆ. ಮುಂಬೈ ತಂಡದ ಒಟ್ಟು 6 ಆಟಗಾರರು ಬೌಲಿಂಗ್ ಮಾಡಿದರು. ಅದರಲ್ಲಿ ಐವರು ಕನಿಷ್ಠ ಒಂದು ವಿಕೆಟ್ ಪಡೆದರು. ನಾಯಕ ಹಾರ್ದಿಕ್ ಪಾಂಡ್ಯ ಗರಿಷ್ಠ 2 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್, ಮುಜೀಬ್ ಉರ್ ರೆಹಮಾನ್ ಮತ್ತು ಸತ್ಯನಾರಾಯಣ್ ರಾಜು ತಲಾ ಒಂದು ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ: ಪ್ರಸಿದ್ದ ಕೃಷ್ಣ 4-0-18-2