ತುರುವೇಕೆರೆ: ತಾಲೂಕಿನ ಜೀವನದಿ ಎಂದೇ ಹೆಸರಾದ ಮಲ್ಲಾಘಟ್ಟ ಕೆರೆಯ ನೀರು ತುರುವೇಕೆರೆ ಪಟ್ಟಣದ ನಾಗರೀಕರಿಗೆ ಕುಡಿಯುವ ನೀರಿನ ಮೂಲ ಆಧಾರವಾಗಿದೆ. ಇಂತಹ ಅಮೂಲ್ಯ ಕೆರೆಯ ನೀರಿಗೆ ತಿಪಟೂರು ನಗರದ ಯುಜಿಡಿ(ಒಳಚರಂಡಿ)ಯ ಕೊಳಚೆ ನೀರು ಹರಿದು ಬರುತ್ತಿದ್ದು, ಇದರಿಂದ ನೀರು ಕಲುಷಿತಗೊಳ್ಳುತ್ತಿದೆ. ಕೂಡಲೇ ಯುಜಿಡಿ ನೀರು ಮಲ್ಲಾಘಟ್ಟ ಕೆರೆ ಸೇರದಂತೆ ತಡೆಯಬೇಕು ಮತ್ತು ನೀರು ಹರಿಸುತ್ತಿರುವ ತಿಪಟೂರು ನಗರಸಭೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಲ್ಲಾಘಟ್ಟ ಶ್ರೀ ಗಂಗಾಧರೇಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ ಕಾಂತರಾಜು ಒತ್ತಾಯಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಿಪಟೂರು ನಗರಸಭೆಯು ತಿಪಟೂರು ನಗರದ ಯುಜಿಡಿ (ಒಳಚರಂಡಿ) ನೀರನ್ನು ಹಿಂಡಿಸ್ಕೆರೆ ಕೆರೆಗೆ ಹರಿಯುವಂತೆ ಮಾಡಿದ್ದು, ಆ ನೀರು ಹಳ್ಳದ ಹಾಗೂ ಚಾನಲ್ ಮೂಲಕ ತಿಪಟೂರು ತಾಲ್ಲೂಕಿನ ಕರಿಕೆರೆ ಗ್ರಾಮದ ಕೆರೆಯನ್ನು ಸೇರಿದೆ. ಈಗ ಕರಿಕೆರೆ ಗ್ರಾಮದ ಕೆರೆಯ ಕೋಡಿ ಬಿದ್ದಿದೆ. ಇದಕ್ಕೆ ಕಾರಣ ಹೇಮಾವತಿ ನೀರಲ್ಲ. ತಿಪಟೂರು ನಗರದ ಕೊಳಚೆ ನೀರಾಗಿದೆ. ಈ ಕೊಳಚೆ ನೀರು ಹಳ್ಳದ ಮೂಲಕ ಹರಿದು ಬಂದು ಇದೀಗ ತುರುವೇಕೆರೆ ತಾಲ್ಲೂಕಿನ ಮಲ್ಲಾಘಟ್ಟ ಕೆರೆ ಸೇರುತ್ತಿದೆ. ಇದರಿಂದ ಕೆರೆ ನೀರು ಕಲುಷಿತಗೊಳ್ಳುತ್ತಿದೆ. ಮಲ್ಲಾಘಟ್ಟ ಕೆರೆ ನೀರನ್ನು ತುರುವೇಕೆರೆ ಪಟ್ಟಣದ ನಾಗರೀಕರಿಗೆ ಕುಡಿಯುವುದಕ್ಕಾಗಿ ಶುದ್ದೀಕರಿಸಿ ಬಳಸಲಾಗುತ್ತಿದೆ. ಈಗ ಕೆರೆ ನೀರು ಕಲುಷಿತಗೊಂಡಿರುವುದರಿಂದ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ತಲುಪಲಿದೆ. ಇದಲ್ಲದೆ ಮಲ್ಲಾಘಟ್ಟ ಕೆರೆಯಲ್ಲಿ ವಿವಿಧ ಗ್ರಾಮಗಳ ಜನತೆ ತಮ್ಮ ಗ್ರಾಮದ ದೇವರನ್ನು ಗಂಗಾ ಪೂಜೆಗೆ ಕರೆತರುತ್ತಾರೆ. ದೇವರ ಪೂಜೆಗೂ ನೀರು ಯೋಗ್ಯವಿಲ್ಲದಂತಹ ಪರಿಸ್ಥಿತಿಯನ್ನು ತಿಪಟೂರು ನಗರಸಭೆ ನಿರ್ಮಾಣ ಮಾಡುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದರು.
ಈ ಮೊದಲು ತಿಪಟೂರು ನಗರಸಭೆ ಪಟ್ಟಣದ ಯುಜಿಡಿ(ಒಳಚರಂಡಿ) ಕೊಳಚೆ ನೀರನ್ನು ಕಲ್ಲೇಗೌಡನಪಾಳ್ಯ ಹಾಗೂ ಹುಚ್ಚಗೊಂಡನಹಳ್ಳಿ ಮಧ್ಯೆ ಹರಿಸಲು ವ್ಯವಸ್ಥೆ ಮಾಡಿಕೊಂಡಿತ್ತು. ಆ ಭಾಗದ ಜನರು ಒಳಚರಂಡಿ ಕೊಳಚೆ ನೀರಿನಿಂದಾಗುವ ವಾಸನೆ ಹಾಗೂ ಸಮಸ್ಯೆಗಳ ಕುರಿತು ಪ್ರತಿಭಟನೆ ನಡೆಸಿ, ಒಳಚರಂಡಿ ನೀರನ್ನು ಆ ಭಾಗಕ್ಕೆ ಹರಿಸದಂತೆ ಆಗ್ರಹಿಸಿದ್ದರು. ಇದರಿಂದಾಗಿ ನಗರಸಭೆ ಈಗ ತಿಪಟೂರು ತಾಲ್ಲೂಕಿನ ಹಿಂಡಿಸ್ಕೆರೆ ಕೆರೆಯ ಕಡೆಗೆ ಒಳಚರಂಡಿ ನೀರನ್ನು ಹರಿಸುತ್ತಿದೆ. ಈ ನೀರು ಮುಂದಕ್ಕೆ ಹರಿದು ತುರುವೇಕೆರೆ ತಾಲೂಕಿನ ಮಲ್ಲಾಘಟ್ಟ ಕೆರೆಯನ್ನು ಸೇರಿ ಎಲ್ಲೆಡೆ ಕೆರೆಯ ನೀರು ಕಲುಷಿತಗೊಳ್ಳುವಂತೆ ಮಾಡಿದೆ. ಇದಕ್ಕೆ ನಗರಸಭೆಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.
ಈ ಬಗ್ಗೆ ಈಗಾಗಲೇ ತಿಪಟೂರು ತಾಲೂಕು ಕೆ.ಬಿ.ಕ್ರಾಸ್ ನಲ್ಲಿರುವ ಹೇಮಾವತಿ ಇಲಾಖೆ ಎಇಇ ಬಳಿ ಮಾತನಾಡಿದ್ದು, ಕೆರೆಯ ನಿರ್ವಹಣೆ ನಮಗೆ ಸೇರಿದ್ದಲ್ಲ, ಈಗಾಗಲೇ ಕೆರೆಯನ್ನು ತಿಪಟೂರು ನಗರಸಭೆಗೆ ಹಸ್ತಾಂತರಿಸಲಾಗಿದೆ. ಅವರೊಂದಿಗೆ ಮಾತನಾಡುವಂತೆ ಹೇಳಿದ್ದಾರೆ. ಮಲ್ಲಾಘಟ್ಟ ಕೆರೆಯಿಂದ ತುರುವೇಕೆರೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ತುರುವೇಕೆರೆ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಗಳೊಂದಿಗೂ ಸಹ ಈ ವಿಚಾರ ಪ್ರಸ್ತಾಪಿಸಿದ್ದೇನೆ. ಮುಖ್ಯಾಧಿಕಾರಿಗಳು, ತಿಪಟೂರು ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಲ್ಲಾಘಟ್ಟ ಕೆರೆಗೆ ತಿಪಟೂರು ಯುಜಿಡಿ ನೀರು ಸೇರದಂತೆ ಕ್ರಮ ವಹಿಸುವ ಭರವಸೆ ನೀಡಿದ್ದಾರೆಂದರು.
ತಿಪಟೂರು ನಗರದ ಯುಜಿಡಿ(ಒಳಚರಂಡಿ) ಕೊಳಚೆ ನೀರು ಮಲ್ಲಾಘಟ್ಟ ಕೆರೆಗೆ ಹರಿದು ಬರುತ್ತಿರುವ ಕುರಿತಂತೆ ಈಗಾಗಲೇ ಕ್ಷೇತ್ರದ ಶಾಸಕರು, ತುರುವೇಕೆರೆ ಪಟ್ಟಣ ಪಂಚಾಯ್ತಿ, ಕೆ.ಬಿ.ಕ್ರಾಸ್ ಹೇಮಾವತಿ ಇಲಾಖೆ, ತಿಪಟೂರು ಉಪವಿಭಾಗಾಧಿಕಾರಿ, ತುಮಕೂರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದು, ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೇನೆ ಎಂದರು.
ವರದಿ : ಗಿರೀಶ್ ಕೆ ಭಟ್