ಸೇಡಂ:ತಾಲೂಕಿನ ರಂಜೋಳ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರ ಆಡಿಕಿ ಗ್ರಾಮಕ್ಕೆ ವಿಶೇಷ ಬಸ್ ಸೌಕರ್ಯ ಒದಗಿಸಬೇಕು ಹಾಗೂ ತಾಲೂಕಿನಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೆ ವಿಶೇಷ ಬಸ್ ಗಳ ಸೌಕರ್ಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇಡಂ ಘಟಕ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ವತಿಯಿಂದ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ. ರಾಮಚಂದ್ರ ಗುತ್ತೇದಾರ್ ಮಾತನಾಡಿ ರಂಜೋಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಬೇರೆ ಬೇರೆ ಹಳ್ಳಿಗಳಿಂದ ಹಣಮನಹಳ್ಳಿ, ಸಿಂಧನಮಡು, ಇಮಾಡಪೂರ, ಮಾದರಿ, ನಾಗಸನಹಳ್ಳಿ, ಭೂತಪುರ್, ಜಾಕನಹಳ್ಳಿ, ಮಾಧವಾರ್, ಚಿಟಕನ ಪಲ್ಲಿ ಗ್ರಾಮಗಳ ವಿದ್ಯಾರ್ಥಿಗಳು ಸೇರಿ 80 ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು ಎಲ್ಲಾ ವಿದ್ಯಾರ್ಥಿಗಳು ಕೂಲಿ ಕಾರ್ಮಿಕರ ರೈತರ ಮಕ್ಕಳಾಗಿರುತ್ತಾರೆ. ಅವರಲ್ಲಿ ಯಾವುದೇ ತರಹ ವೈಯಕ್ತಿಕ ದ್ವಿಚಕ್ರ ವಾಹನಗಳಿಲ್ಲದ ಕಾರಣ ಬೇಸಿಗೆ ಇರುವುದರಿಂದ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು ಸರಕಾರಿ ಪ್ರೌಢಶಾಲೆ ರಂಜೋಳದಿಂದ ಬೆಳಿಗ್ಗೆ 9ಗಂಟೆಗೆ ಪರೀಕ್ಷಾ ಕೇಂದ್ರ ಆಡಿಕಿ ಗ್ರಾಮಕ್ಕೆ ಹಾಗೂ ಮಧ್ಯಾಹ್ನ 2 ಗಂಟೆಗೆ ಆಡಿಕಿ ಗ್ರಾಮದಿಂದ ರಂಜೋಳ್ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸಿದರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಮಾಡಿದಂತಾಗುತ್ತದೆ ಪರೀಕ್ಷೆಯ ವೇಳೆಯಲ್ಲಿ ಮಾತ್ರ ಬಸ್ ಸೌಕರ್ಯ ಒದಗಿಸಿದರೆ ಸಾಕು, ಇದು ಅಲ್ಲದೆ ಸೇಡಂ ತಾಲೂಕಿನಲ್ಲಿ ಅಲ್ಲಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಸ್ಸುಗಳ ಸೌಕರ್ಯ ಇಲ್ಲದಿದ್ದರೆ ದಯಾಳುಗಳಾದ ತಾವುಗಳು ಗಮನಿಸಿ ಬಸ್ ಸೌಕರ್ಯ ಒದಗಿಸಬೇಕೆಂದು ವಿದ್ಯಾರ್ಥಿಗಳ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಮನವಿಗೆ ಸ್ಪಂದಿಸಿದ ಅಧಿಕಾರಿಗಳಾದ ಎಟಿಎಸ್ ವಿಜಯಕುಮಾರ್ ಅವರು ಪರೀಕ್ಷಾ ಕೇಂದ್ರಗಳಿಗೆ ಪ್ರತಿಯೊಂದು ಗ್ರಾಮದಿಂದ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಹೇಶ್ ಪಾಟೀಲ್, ಚಂದ್ರಶೇಖರ್, ಶ್ರೀನಿವಾಸ್ ರೆಡ್ಡಿ, ದೆವು ಕುಮಾರ್, ಗುಂಡಪ್ಪ, ರಾಘವೇಂದ್ರ, ಮಹೇಶ್ ರೆಡ್ಡಿ, ಚಂದ್ರಶೇಖರ್ ಮಡಿವಾಳ, ಕಿರಣ್ ಪಾಟೀಲ್, ವೆಂಕಟೇಶ್, ಪವನ್ ಕುಲಕರ್ಣಿ, ಭೀಮಯ್ಯ, ಸುಭಾಷ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್