ಸಿರುಗುಪ್ಪ : ನಗರದ 16ನೇ ವಾರ್ಡಿನಲ್ಲಿರುವ ಶ್ರೀ ಉರುಕುಂದಿ ಈರಣ್ಣ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಕಾರ್ತಿಕ ಕಡೆ ದಿನದ ನಿಮಿತ್ತ ಸಾರ್ವಜನಿಕರಿಂದ ಸಾಮೂಹಿಕ ದೀಪೋತ್ಸವ ಕಾರ್ಯಕ್ರಮ ಜರುಗಿತು.
ಛಟ್ಟಿ ಅಮವಾಸ್ಯೆ ನಿಮಿತ್ತ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಶ್ರೀ ಉರುಕುಂದಿ ಸ್ವಾಮಿಗೆ ಪಂಚಾಮೃತಾಭಿಷೇಕ, ವಿವಿಧ ಫಲಪುಷ್ಪಗಳ ಅಲಂಕಾರ, ಮಹಾ ಮಂಗಳಾರತಿ ಹಾಗೂ ಮದ್ಯಾಹ್ನ ಪ್ರಸಾದದ ಮುನ್ನ ಫಲಕ್ಕಿ ಸೇವೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು ಹಲವಾರು ಭಕ್ತರು ಭಾಗಿಯಾಗಿ ಹರಕೆ ಸಲ್ಲಿಸಿದರು.
ಅರ್ಚಕ ಶರಣಯ್ಯ ಸ್ವಾಮಿ ಮಾತನಾಡಿ ಪ್ರತಿ ಅಮವಾಸ್ಯೆಯು ಸ್ವಾಮಿಯ ದೇವಸ್ಥಾನದಲ್ಲಿ ದೇಶ ರಕ್ಷಣೆಗೈಯುತ್ತಿರುವ ನಮ್ಮ ಯೋಧರು, ದೇಶಕ್ಕೆ ಅನ್ನ ನೀಡುವ ಅನ್ನದಾತರ ಒಳಿತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ದಾನಿಗಳಿಂದ ಅನ್ನದಾಸೋಹ ಸೇವೆಯಿರುತ್ತದೆ. ಇಂದು ಕಾರ್ತಿಕ ಕೊನೆಯ ದಿನದ ನಿಮಿತ್ತ ದೇವಸ್ಥಾನದಲ್ಲಿ ಎಲ್ಲಾ ಭಕ್ತರಿಂದ ಸಾಮೂಹಿಕ ದೀಪೋತ್ಸವ ಹಾಗೂ ಗರುಡ ಸ್ಥಂಭದ ಮೇಲೆ ಅಖಂಡ ದೀಪವನ್ನು ಪ್ರತಿಷ್ಟಾಪಿಸಲಾಗಿದೆಂದು ತಿಳಿಸಿದರು.
ದೇವಸ್ಥಾನ ಸೇವಾ ಸಮಿತಿಯ ಸದಸ್ಯರಾದ ಹೆಚ್.ರಂಗನಾಥಶೆಟ್ಟಿ ಮಾತನಾಡಿ ಈ ಅಮವಾಸ್ಯೆಯಂದು ಸ್ಥಳೀಯ ಸದಾಶಿವ ನಗರದ ನಿವಾಸಿಗಳಾದ ನಾಗರಾಜ, ಹರಿಕೃಷ್ಣ ಕುಟುಂಬದವರು ಅನ್ನದಾಸೋಹ ಸೇವೆಗೈದಿದ್ದಾರೆ. ಈಗಾಗಲೇ ದೇವಸ್ಥಾನದ ಅಭಿವೃದ್ದಿಗೆ ಹಲವು ದಾನಿಗಳು ದೇಣಿಗೆ ನೀಡಿದ್ದು, ಪೂರ್ಣ ಅಭಿವೃದ್ದಿಗೆ ಭಕ್ತಾದಿಗಳು ಸಹಕರಿಸಿ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದರು.
ಇದೇ ವೇಳೆ ಎಮ್.ಶಿವಕುಮಾರ್ ಹಾಗೂ ಶ್ರೀಶೈಲಯ್ಯಶೆಟ್ಟಿ ತಲಾ 11 ಸಾವಿರ ರೂಪಾಯಿ ದೇಣಿಗೆ ನೀಡಿ ರಸೀದಿ ಪಡೆದರು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಸುರೇಶರೆಡ್ಡಿ, ಉಪಾಧ್ಯಕ್ಷ ಎಳ್ಳಾರ್ತಿ ವೀರೇಶ ನಾಯಕ, ಮಲ್ಲಿಕಾರ್ಜುನ, ಶ್ರೀಧರಶೆಟ್ಟಿ ಹಾಗೂ ಭಕ್ತಾದಿಗಳಿದ್ದರು.
ವರದಿ : ಶ್ರೀನಿವಾಸ ನಾಯ್ಕ.




