ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ (ಕೆಎಎಸ್) 384 ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮರುಪರೀಕ್ಷೆಗೆ ಆದೇಶ ನೀಡಲು ನಿರಾಕರಿಸಿದ ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ), ಪ್ರಶ್ನೆ ಪತ್ರಿಕೆಯ ಅನುವಾದದಲ್ಲಿ ಆಗಿರುವ ಲೋಪಗಳ ಬಗ್ಗೆ ತಜ್ಞರ ಸಮಿತಿ ಮರುಪರಿಶೀಲಿಸಿ ತೀರ್ಮಾನಿಸಬಹುದು ಎಂದು ತಿಳಿಸಿದೆ.
ಈ ಆದೇಶದಿಂದಾಗಿ ಕೆಎಎಸ್ ಮುಖ್ಯ ಪರೀಕ್ಷಾ ಪ್ರಕ್ರಿಯೆಯನ್ನು ಮುಂದುವರಿಸಲು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಹಾದಿ ಸುಗಮವಾಗಿದ್ದು, ನಿಗದಿಯಂತೆ ಇದೇ 28ರಿಂದ ಮುಖ್ಯ ಪರೀಕ್ಷೆಗಳು ನಡೆಯಲಿವೆ.
ಪವಿತ್ರಾ ಮತ್ತಿತರ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ಕುರಿತು ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಂಗ ಸದಸ್ಯ ಎಸ್.ವೈ.ವಟವಟಿ ಮತ್ತು ಆಡಳಿತ ಸದಸ್ಯೆ ಡಾ.ಅಮಿತಾ ಪ್ರಸಾದ್ ಅವರಿದ್ದ ದ್ವಿಸದಸ್ಯ ಪೀಠ ಗುರುವಾರ ಪ್ರಕಟಿಸಿದೆ.
ಅಲ್ಲದೇ, ಆಯೋಗ ಸಲ್ಲಿಸಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ಈಗಾಗಲೇ ಒಮ್ಮೆ ಪರೀಕ್ಷೆ ರದ್ದುಗೊಳಿಸಿ, ಮರು ಪೂರ್ವಭಾವಿ ಪರೀಕ್ಷೆ ನಡೆಸಲಾಗಿದೆ. ಈ ಹಂತದಲ್ಲಿ ಪೂರ್ವಭಾವಿ ಪರೀಕ್ಷೆಗೆ ಆದೇಶಿಸಲು ಸಾಧ್ಯವಿಲ್ಲ. ಅಲ್ಲದೆ, ಪ್ರಶ್ನೆಪತ್ರಿಕೆಯನ್ನು ಇಂಗ್ಲಿಷ್ನಿಂದ ಕನ್ನಡ ಅನುವಾದ ಮಾಡುವಲ್ಲಿ ಲೋಪವಿರುವುದು ನಿಜ. ಅದಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ಕೃಪಾಂಕ (ಗ್ರೇಸ್ ಮಾರ್ಕ್ಸ್) ನೀಡಿದೆ. ಕನ್ನಡ ಅನುವಾದದಲ್ಲಿ ಗೊಂದಲವಿದ್ದರೆ ಇಂಗ್ಲಿಷ್ ಪ್ರಶ್ನೆ ಪರಿಗಣಿಸಲು ಸೂಚನೆಯಿದೆ. ಅರ್ಜಿ ಸಂಖ್ಯೆ 285ರಿಂದ 308/2025ಗಳಲ್ಲಿಅನುವಾದದ ಕೆಲ ಹೊಸ ಲೋಪಗಳನ್ನು ಗುರುತಿಸಿದ್ದಾರೆ. ಆ ಬಗ್ಗೆ ಮಾತ್ರ ತಜ್ಞರ ಸಮಿತಿ ಮರುಪರಿಶೀಲಿಸಿ ತೀರ್ಮಾನಿಸಬಹುದು. ಒಂದು ವಾರದಲ್ಲಿಈ ಬಗ್ಗೆ ಕ್ರಮ ಕೈಗೊಳ್ಳಲು ಕೆಪಿಎಸ್ಸಿಗೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಪ್ರಕರಣದ ಹಿನ್ನೆಲೆ: ಕೆಪಿಎಸ್ಸಿ 2024ರ ಆ.27ಕ್ಕೆ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಆಗ ಪ್ರಶ್ನೆಪತ್ರಿಕೆಯನ್ನು ಆಂಗ್ಲಭಾಷೆಗೆ ಅನುವಾದ ಮಾಡುವಾಗ ಭಾರಿ ಲೋಪಗಳಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ನಂತರ ಕೆಪಿಎಸ್ಸಿ 2024ರ ಡಿ.29ಕ್ಕೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ 553 ಪರೀಕ್ಷಾ ಕೇಂದ್ರಗಳಲ್ಲಿ ಪೂರ್ವಭಾವಿ ಮರು ಪರೀಕ್ಷೆ ನಡೆಸಿತ್ತು. 2.10 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 1.05 ಲಕ್ಷ (ಶೇ.47.7) ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆ ಪರೀಕ್ಷೆಯಲ್ಲೂ ಸುಮಾರು 59 ಪ್ರಶ್ನೆಗಳ ಅನುವಾದದಲ್ಲಿ ದೋಷಗಳಾಗಿವೆ. ಹಾಗಾಗಿ, ಪರೀಕ್ಷೆ ರದ್ದುಗೊಳಿಸಬೇಕು ಎಂದು ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಆಯೋಗ ಫೆ.10ರಂದು ಪೂರ್ವಭಾವಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿ, 1:15ರ ಅನುಪಾತದಲ್ಲಿಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಿತ್ತು. ಇದನ್ನು ಪ್ರಶ್ನಿಸಿ ಕೆಎಟಿಗೆ ಅರ್ಜಿ ಸಲ್ಲಿಸಲಾಗಿತ್ತು.