ಚೇಳೂರು: ಮಕರ ಸಂಕ್ರಾಂತಿ ಹಬ್ಬವನ್ನು ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೆ ಎತ್ತುಗಳಿಗೆ ಮೈ ತೊಳೆದು ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂದ ದೃಶ್ಯಗಳು. ಹಾಗೂ ಸಂಜೆ ಕಾಟಿಮಾರಾಯನ ಪೂಜೆಯನ್ನು ನಡೆಸಲಾಯಿತು.
ಸಂಕ್ರಾಂತಿ ಹಬ್ಬದ ಅಂಗವಾಗಿ ತಾಲ್ಲೂಕಿನ ಚಿಲಕಲನೆರ್ಪು ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಕಾಟಿಮರಾಯನ ಪೂಜೆ: ಚಿಲಕಲನೆರ್ಪು ಗ್ರಾಮದಲ್ಲಿ ಸಂಜೆ ರೈತರು ಕ್ಷುದ್ರ ದೇವತೆಗಳ ಹೆಸರುಗಳಲ್ಲಿ ಒಂದಾದ ಕಾಟಿಮರಾಯನನ್ನು ಪೂಜಿಸಿದರು. ರಾಸುಗಳಿಗೆ ಯಾವುದೇ ಕಾಯಿಲೆ, ತೊಂದರೆ ಬಾರದಿರಲೆನ್ನುವ ನಂಬಿಕೆಯಿಂದ ಸಂಕ್ರಾಂತಿ ಹಬ್ಬದ ದಿನ ಸಂಜೆ ವಿಶೇಷವಾಗಿ ಪೂಜಿಸಲಾಗುತ್ತದೆ.
ಸಂಕ್ರಾಂತಿ ಹಬ್ಬದ ದಿನ ಕಾಟಿಮಾರಾಯನ ಗೋಪುರಕ್ಕೆ ಸುಣ್ಣ ಮತ್ತು ಕೆಮ್ಮಣ್ಣು ಪಟ್ಟೆಗಳನ್ನು ಬಳಿದು ಅಲಂಕರಿಸಲಾಗುತ್ತದೆ. ಕಾಟಿಮರಾಯನಿಗೆ ಕೊಯ್ದಾಗಿರುವ ರಾಗಿ ಹೊಲದಲ್ಲಿ ದೊರೆಯುವ ಅಣ್ಣೆ ಹೂ, ತೊಳಸಿ ಸೊಪ್ಪು, ಅವರೆ ಹೂವಿನ ಗೊಂಚಲು, ತುಂಬೆ ಹೂವು ಹಾಗೂ ಹೊಸ ಪೊರಕೆ ಕಡ್ಡಿಗಳಿಂದ ಅಲಂಕರಿಸಿ ಪೂಜಿಸುವುದು ವಿಶೇಷ.
ಊರ ಹೊರಗಿನ ಭಾಗದಲ್ಲಿ ಮಣ್ಣಿನಿಂದ ಗೋಪುರ ನಿರ್ಮಾಣ ಮಾಡಿ, ಅದನ್ನು ಕಾಟಿಮರಾಯ ಎಂದು ಪೂಜೆಸುವ ವಾಡಿಕೆ ತಾಲ್ಲೂಕಿನ ಚಿಲಕಲನೆರ್ಪು ಗ್ರಾಮದಲ್ಲಿ ಬಹುತೆಕ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ’ ಎನ್ನುತ್ತಾರೆ
ಹಬ್ಬದ ದಿನ ಸೋಮವಾರ ಸಂಜೆ ಊರ ಹೊರಗಿನ ಭಾಗದಲ್ಲಿ ಕಾಟಿಮರಾಯನ ಬಳಿಗೆ ಗ್ರಾಮಸ್ಥರು ತಮ್ಮ ರಾಸುಗಳೊಂದಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದ ನಂತರ ರಾಸುಗಳಿಗೆ ಪ್ರಸಾದವನ್ನು ನೀಡಲಾಯಿತು. ನಂತರ ರಾಸುಗಳನ್ನು ಓಡಿಸಿಕೊಂಡು ಊರು ಮಧ್ಯಕ್ಕೆ ಕರೆ ತಂದು ಅಲ್ಲಿ ಅಗ್ನಿಗೆ ಪೂಜೆ ಸಲ್ಲಿಸಿದ ನಂತರ ಕಿಚ್ಚು ಹಾಯಿಸಲಾತು.ಕಿಚ್ಚು ಹಾಯಿಸಿದ ನಂತರ ರಾಸುಗಳು ಮನೆಗಳಿಗೆ ತೆರಳಿದವು. ಆ ನಂತರ ಗ್ರಾಮದ ಯುವಕರು ಪಂಜುಗಳನ್ನು ಕಟ್ಟಿಕೊಂಡು ಊರಿನ ಗಡಿ ಭಾಗದವರೆಗೂ ಹೋಗಿ ಕಿಚ್ಚು ಹಾಕಿ ಬಂದರು.
ವರದಿ :ಯಾರಬ್. ಎಂ.