ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರದಲ್ಲಿ ಒಕ್ಕಲಿಗ ಸಮುದಾಯ ಮತ್ತು ಮಾಯಸಂದ್ರ ಹೋಬಳಿ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವ ಸಮಿತಿ ವತಿಯಿಂದ ಅದ್ದೂರಿಯಾಗಿ ನಾಡಪ್ರಭುಶ್ರೀ ಕೆಂಪೇಗೌಡರ 516ನೇ ಜಯಂತೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಬೆಳಿಗ್ಗೆ ಗ್ರಾಮ ದೇವತೆ ಶ್ರೀ ಕೊಲ್ಲಾಪುರದಮ್ಮ ದೇವಿಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ಮುಖಂಡರು, ನಾಡಪ್ರಭು ಶ್ರೀ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೆಂಪೇಗೌಡರಿಗೆ ಜೈಕಾರವನ್ನು ಕೂಗುತ್ತಾ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.

ಡೊಳ್ಳು ಹನುಮಂತಯ್ಯ ಜಾನಪದ ತಂಡ ಹಾಗೂ ಶ್ರೀ ಮಾರುತಿ ಕಲಾತಂಡದವರಿಂದ ಡೊಳ್ಳು ಕುಣಿತ, ವೀರಗಾಸೆ, ತಮಟೆವಾದ್ಯ, ಚಿಲಿ ಪಿಲಿ ಗೊಂಬೆಗಳು, ಪೂಜಾ ಕುಣಿತ ಮೆರವಣಿಗೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ವಿಶೇಷವಾಗಿ “ಹಳ್ಳಿಕಾರ್ ಹೋರಿಗಳ” ಪ್ರದರ್ಶನವೂ ಕೆಂಪೇಗೌಡರ ಜಯಂತಿಯ ಸಂಭ್ರಮದಲ್ಲಿ ಗ್ರಾಮಸ್ಥರ ಕಣ್ಮನ ಸೆಳೆಯಿತು.
ನಾಡಪ್ರಭು ಶ್ರೀ ಕೆಂಪೇಗೌಡರ ಜೀವನ ಚರಿತ್ರೆ, ಅವರ ತತ್ವ, ಸಿದ್ಧಾಂತ, ಆದರ್ಶಗಳನ್ನು ಸಾರ್ವಜನಿಕರಿಗೆ ಜಯಂತಿ ಸಮಾರಂಭದಲ್ಲಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಮಾಯಸಂದ್ರ ಹೋಬಳಿಯ ಒಕ್ಕಲಿಗ ಸಮುದಾಯ, ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವ ಸಮಿತಿ, ಸಮುದಾಯದ ಯುವ ಮುಖಂಡರುಗಳು, ಮಹಿಳೆಯರು ಸೇರಿದಂತೆ ವಿವಿಧ ಸಮಾಜದ ಮುಖಂಡರುಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ರೈತಪರ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ: ಗಿರೀಶ್ ಕೆ ಭಟ್




