ಚಿಂತಾಮಣಿ : ರಾಯಪಲ್ಲಿ ಗ್ರಾಮದಲ್ಲಿ ಓಣಿಯ ಜಾಗದ ದಾರಿಯನ್ನು ಭೂ ಮಾಪನ ಇಲಾಖೆ ಅಧಿಕಾರಿ ಖಾದರ್ ಸಾಬ್ ಹಾಗೂ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯಿಂದ ಗುರುವಾರ ಯಶಸ್ವಿಯಾಗಿ ತೆರವು ಮಾಡಲಾಯಿತು.
ತಾಲೂಕಿನ ಅಂಬಾಜಿದುರ್ಗ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ರಾಯಪಲ್ಲಿ ಗ್ರಾಮದಲ್ಲಿ ಸಾರ್ವಜನಿಕರು ಹೊಲಗಳಿಗೆ ತೆರಳುವ ಓಣಿಯ ದಾರಿಯನ್ನು ಅಕ್ಕಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡಿದ್ದು ದಾರಿ ಗುರುತಿಸಿಕೊಡಲು ಗ್ರಾಮಸ್ಥರು ತಹಸೀಲ್ದಾರ್ ಕಚೇರಿಗೆ ಮನವಿ ಮಾಡಿದ್ದರು.
ತಹಸೀಲ್ದಾರ್ ರವರ ಆದೇಶದ ಮೇರೆಗೆ ತಾಲೂಕಿನ ಭೂ ಮಾಪನ ಇಲಾಖೆ ಅಧಿಕಾರಿ ಖಾದರ್ ಸಾಬ್ ಸೇರಿದಂತೆ ರಾಜಸ್ವ ನಿರೀಕ್ಷಕರು
ಗ್ರಾಮದ ಸ್ಥಳ ಪರಿಶೀಲನೆ ಮಾಡಿ ಸದರಿ ಗ್ರಾಮದ ಸರ್ಕಾರಿ ಒಣಿಯನ್ನು ನಕ್ಷೆಯಲ್ಲಿ ಪರಿಶೀಲಿಸಿ ಗ್ರಾಮಸ್ಥರಿಗೆ ಅನುಕೂಲಕ್ಕಾಗಿ ಇದ್ದ ಒಣಿಯನ್ನು ಉಳಿಸಿಕೊಡಲು, ಸರ್ವೆಕಾರ್ಯವನ್ನು ಮಾರ್ಚ್ 20 ರಂದು ನಿಗಧಿಪಡಿಸಲಾಗಿದ್ದು,
ಅದರಂತೆ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಭೂ ಮಾಪನ ಇಲಾಖೆ ಅಧಿಕಾರಿ ಖಾದರ್ ಸಾಬ್ ರವರು ಸರ್ಕಾರಿ ಓಣಿಯ ಜಾಗ ಜೆಸಿಬಿ ಮೂಲಕ ತೆರವುಗೊಳಿಸಿ ಗ್ರಾಪಂಗೆ ಹಸ್ತಾಂತರಿಸಿದರು.
ಈ ವೇಳೆ ಖಾದರ್ ಸಾಬ್ ಮಾತನಾಡಿ ತಾಲೂಕಿನಾದ್ಯಂತ ಗ್ರಾಮಗಳಲ್ಲಿ ಸರ್ಕಾರಿ ಅಸ್ತಿ ಉಳಿಸುವುದು,ನಮ್ಮ ಕೆಲಸವಾಗಿದ್ದು,, ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞನೆ ಸಲ್ಲಿಸುತ್ತೇವೆ, ಬೇರೆಯವರ ಪಾಲಾಗಿದ್ದ ಜಾಗವೀಗ ಗ್ರಾಮಸ್ಥರ ಅನುಕೂಲಕ್ಕೆ ಕಲ್ಪಿಸಲಾಗಿದೆ,ಮುಂದಿನ ದಿನಗಳಲ್ಲಿ ಸರ್ಕಾರಿ ರಸ್ತೆ ಓಣಿ ಯಾರೆ ಒತ್ತುವರಿ ಮಾಡಿದ್ದಲ್ಲಿ ಕಾನೂನು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಸುಪ್ರಿಯಾ,ಗ್ರಾಂ ಪಂಚಾಯತಿ ಅಧಿಕಾರಿಗಳು ಸೇರಿದಂತೆ ಸ್ಥಳೀಯ ರೈತರು ಹಾಜರಿದ್ದರು.
ವರದಿ :ಯಾರಬ್. ಎಂ.