ಬೀದರ್ : ಯಾವುದೇ ರಾಗ, ದ್ವೇಷವಿಲ್ಲದೆ ಕರ್ತವ್ಯ ನಿರ್ವಹಿಸುವುದಾಗಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಶಾಸಕನಾಗಿ, ಈಗ ಒಂದು ಕೋಮಿನ ಬಗ್ಗೆ ಹೀನಾಯವಾಗಿ ಮಾತನಾಡುವ, ದ್ವೇಷ ಬಿತ್ತುವ ಕೋಮುವಾದಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶಾಸಕನಾಗಿರುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ಹೊಡೆಯುತ್ತಾರೆ, ಅವರ ಹೆಣ್ಣುಮಕ್ಕಳನ್ನು ಹೊತ್ತೊಯ್ಯುತ್ತಾರೆ ಎಂದು ಊಹಾತ್ಮಕ ಹೇಳಿಕೆ ನೀಡಿ, ಮತದಾರರಲ್ಲಿ ಭೀತಿ ಹುಟ್ಟಿಸುತ್ತಿರುವ ಮತ್ತು ದ್ವೇಷ ಬಿತ್ತುತ್ತಿರುವ ಯತ್ನಾಳ್ ವಿರುದ್ಧ ಚುನಾವಣಾ ಆಯೋಗ ತತ್ ಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಖಂಡ್ರೆ ಕುಟುಂಬ ಲಿಂಗಾಯತರಿಗೆ ಕೊಟ್ಟಿರುವ ಕೊಡುಗೆ ಏನು ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ, ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿ ಸಂಘಟನೆ ಮಾಡಿದ್ದೇ ಶತಾಯುಷಿ ಭೀಮಣ್ಣ ಖಂಡ್ರೆ ಅವರು, ಬೆಂಗಳೂರಿನಲ್ಲಿ ಭವ್ಯ ವೀರಶೈವ ಲಿಂಗಾಯತ ಭವನ ನಿರ್ಮಿಸಿದ್ದೂ ಭೀಮಣ್ಣ ಖಂಡ್ರೆ ಅವರು, ಇಂದು ಜಿಲ್ಲೆ, ತಾಲೂಕು ಮಟ್ಟದಲ್ಲಿ ವೀರಶೈವ ಭವನ ನಿರ್ಮಾಣವಾಗಿದ್ದರೆ ಅದಕ್ಕೆ ಸಭಾ ಕಾರಣ, ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ, ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಿರುವುದು ಮಹಾಸಭಾ.
ಇದಾವ ಮಾಹಿತಿಯೂ ಇಲ್ಲದ ಇತ್ತ ಬಸವವಾದಿಯೂ ಅಲ್ಲದ, ಅತ್ತ ಹಿಂದೂವೂ ಅಲ್ಲದ ಬಸನಗೌಡ ಪಾಟೀಲ್ ಯತ್ನಾಳ್ ರಾತ್ರಿ ಸೆರೆ ಕುಡಿದು, ಮಾಂಸ ತಿಂದು, ಬೆಳಗ್ಗೆ ವಿಭೂತಿ ಹಚ್ಚಿಕೊಂಡು ಬರುತ್ತಾರೆ. ಇವರಿಗೆ ವೀರಶೈವ ಲಿಂಗಾಯತ ಮಹಾಸಭಾ ಬಗ್ಗೆಯಾಗಲೀ, ತಮ್ಮ ತಂದೆ ಪೂಜ್ಯ ಭೀಮಣ್ಣ ಖಂಡ್ರೆ ಅವರ ಬಗ್ಗೆಯಾಗಲೀ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದಾರೆ.