ಲಖನೌ : ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿನ ಒಂದೂವರೆ ವರ್ಷದ ಬಾಲಕನ ಕಣ್ಣಿನಲ್ಲಿ ವಿಭಿನ್ನ ಬದಲಾವಣೆ ಕಂಡು ಜನರು ಅಚ್ಚರಿಗೊಳಗಾಗಿದ್ದಾರೆ. ಮಗು ಯಾವ ಬಣ್ಣದ ಬಟ್ಟೆ ಧರಿಸುತ್ತದೋ ಆತನ ಕಣ್ಣು ಕೂಡಾ ಅದೇ ಬಣ್ಣಕ್ಕೆ ತಿರುಗುವುದನ್ನು ಕಂಡು ಸ್ಥಳೀಯರು ವಿಸ್ಮಿತರಾಗಿದ್ದಾರೆ.
ಬುಲಂದ್‌ಶಹರ್‌ನ ಬಿಸಾ ಕಾಲೋನಿಯಲ್ಲಿ ಈ ಅಚ್ಚರಿಯ ಘಟನೆ ವರದಿಯಾಗಿದೆ. ಅರ್ಶ್ ಎಂಬ ಒಂದೂವರೆ ವರ್ಷದ ಬಾಲಕನ ಕಣ್ಣುಗಳನ್ನು ನೋಡಲೆಂದೇ ಸುತ್ತ ಮುತ್ತಲಿನ ಗ್ರಾಮದ ಜನರು ಆಗಮಿಸುತ್ತಿದ್ದಾರೆ. ಈತನ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಾಲಕನಿಗೆ ಯಾವ ಬಣ್ಣದ ಬಟ್ಟೆ ತೊಡೆಸಿದರೂ ಆತನ ಕಣ್ಣು ಕೂಡಾ ಅದೇ ಬಣ್ಣಕ್ಕೆ ತಿರುಗುತ್ತಿದೆ ಎಂದು ಆತನ ಕುಟುಂಬ ಹೇಳುತ್ತಿದೆ.
ಅರ್ಶ್‌ನ ತಾಯಿ ನಜ್ರೀನ್ ಇದು ಪ್ರಕೃತಿಯ ಪವಾಡ ಎಂದು ನಂಬಿದ್ದಾರೆ. ಏಕೆಂದರೆ ಮಗುವಿನ ಕಣ್ಣು ಆತನ ಬಟ್ಟೆಗಳ ಬಣ್ಣದೊಂದಿಗೆ ಹೊಂದಿಗೆಯಾಗುತ್ತಿರುವುದು ನಿಜಕ್ಕೂ ವಿಸ್ಮಯ ಎನಿಸಿದೆ. ಅರ್ಶ್‌ನ ಕುಟುಂಬವು ಇದು ದೈವಿಕ ಅದ್ಭುತ ಎಂದು ಹೇಳಿದ್ದಾರೆ.
ಆದರೂ ಕಣ್ಣಿನ ತಜ್ಞ ಡಾ. ಅಖಿಲೇಶ್ ಅಗರ್ವಾಲ್ ಇದನ್ನು ದೃಷ್ಟಿ ಭ್ರಮೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದು ಬೆಳಕು ಮತ್ತು ಗ್ರಹಿಕೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.




