ಬೆಳಗಾವಿ :ಬೆಳಗಾವಿಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಘಮಲು ಜೋರಾಗಿದೆ. ಯುವಕರು ಹಾದಿ ತಪ್ಪಿದ್ದಾರೆ. ಬೇರೆ ಬೇರೆ ಕಡೆಯಿಂದ ಪೆಡ್ಲರ್ ಗಳು (peddler) ಇಲ್ಲಿ ಕಾನೂನು ಬಾಹಿರ ಸರಬರಾಜು ಮಾಡ್ತಿದ್ದಾರೆ.
ಇದೀಗ ಕುಂದಾನಗರಿ ಬೆಳಗಾವಿಯನ್ನು ಉಡ್ತಾ ಪಂಜಾಬ್ ಮಾಡಲು ಹೊರಟ್ಟಿದ್ದ ಕತರ್ನಾಕ್ ಗ್ಯಾಂಗ್ನ ಬೆಳಗಾವಿ ಪೊಲೀಸರು ಮುಂಬೈನಲ್ಲಿ (mumbai) ಖೆಡ್ಡಾಗೆ ಬೀಳಿಸಿದ್ದಾರೆ.
ಈ ಗ್ಯಾಂಗ್ ಗೆ ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್ ಆಗಿದ್ದು, 9 ಜನ ಆರೋಪಿಗಳನ್ನ ಬಂಧನ ಮಾಡಿದ್ದಾರೆ. ಬರೀ ಪೆಡ್ಲರ್, ಗಾಂಜಾ ಸೇವನೆ ಮಾಡ್ತಿದ್ದವರನ್ನು ಅರೆಸ್ಟ್ ಮಾಡುತ್ತಿದ್ದ ಪೊಲೀಸರು ಇದೀಗ ಗ್ಯಾಂಗ್ ಲೀಡರ್ನನ್ನು ಬಂಧಿಸಿದ್ದಾರೆ.
ಸಿಇಎನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಆರ್ ಗಡ್ಡೇಕರ್ ನೇತೃತ್ವದ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಬೆಳಗಾವಿ ನಗರಕ್ಕೆ ಸಪ್ಲೈ ಮಾಡುತ್ತಿದ್ದ 30 ಲಕ್ಷ ಮೌಲ್ಯದ 50 ಕೆಜಿ ಗಾಂಜಾ, ಎರಡು ಕಾರು, 13 ಮೊಬೈಲ್ ಜಪ್ತಿ ಮಾಡಿದ್ದಾರೆ.
ಡ್ರಗ್ಸ್ ಮಾಫಿಯಾದ ಮಾಸ್ಟರ್ ಮೈಂಡ್ ಇಸ್ಮಾಯಿಲ್ ಸದ್ದಾಂ ಸಯ್ಯದ, ತಾಜೀರ್ ಬಸ್ತವಾಡೆ, ಪ್ರಥಮೇಶ ಲಾಡ್, ತೇಜಸ್ ವಾಜರೆ, ಶಿವಕುಮಾರ್ ಆಸಬೆ, ರಮಜಾನ್ ಜಮಾದಾರ, ತಾಜೀಬತ ಮುಲ್ಲಾ ಬಂಧಿತ ಆರೋಪಿಗಳಾಗಿದ್ದಾರೆ
ಆರೋಪಿ ಇಸ್ಮಾಯಿಲ್ ಕಳೆದ ನಾಲ್ಕು ವರ್ಷದಿಂದ ಆಯಕ್ಟೀವ್ ಆಗಿದ್ದನು. ಇಡೀ ಬೆಳಗಾವಿಗೆ ಈತನೇ ಗಾಂಜಾ ಸಪ್ಲೈ ಮಾಡುತ್ತಿದ್ದನು.
ಈತನ ಬೆನ್ನು ಬಿದ್ದಿದ್ದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದನು. ಮಧ್ಯಪ್ರದೇಶ, ಮುಂಬೈನಲ್ಲಿ ಇರುತ್ತಿದ್ದ ಈತ ಹಲವು ರಾಜ್ಯಗಳಿಗೂ ಬೇಕಾಗಿರುವ ನಟೋರಿಯಸ್ ಕ್ರಿಮಿನಲ್ ಆಗಿದ್ದಾನೆ.
ಕಳೆದ ಎರಡು ತಿಂಗಳಿನಿಂದ ಬೆಳಗಾವಿ ನಗರ ಪೊಲೀಸರು ಗಾಂಜಾ ಮಾಫಿಯಾದ ಬೆನ್ನು ಬಿದ್ದಿದ್ದರು. ಈವರೆಗೂ ಬೆಳಗಾವಿಯಲ್ಲಿ ಗಾಂಜಾ ಮಾರಾಟ ಮಾಡ್ತಿದ್ದವರನ್ನು ಮಾತ್ರ ಬಂಧಿಸಿದ್ದರು.
ಕಳೆದ ಎಂಟು ತಿಂಗಳ ಅವಧಿಯಲ್ಲಿ ನಗರದಲ್ಲಿ ಬರೋಬ್ಬರಿ 129 ಎನ್ಡಿಪಿಎಸ್ ಕೇಸ್ಗಳು ದಾಖಲಾಗಿದ್ದು, ಇದರಲ್ಲಿ 97 ಆರೋಪಿಗಳನ್ನ ಬಂಧಿಸುವಯಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು, ಕರಾವಳಿ ಭಾಗದಲ್ಲಿ ಮಾದಕ ವಸ್ತುಗಳ ಜಾಲ ಹೆಚ್ಚಾಗುತ್ತಿದೆ. ಇದೀಗ ಇದನ್ನು ಹತ್ತಿಕ್ಕಲು ಪೊಲೀಸರು ವಿನೂತನ ಪ್ರಯತ್ನವೊಂದನ್ನು ಮಾಡಿದ್ದು, ಕ್ಯೂ ಆರ್ ಕೋಡ್ ಮೂಲಕ ದೂರು ನೀಡಬಹುದಾಗಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ ಎಂದು ದೂರುಗಳು ಬಂದಿದೆ.
ಈ ಹಿನ್ನಲೆ ಮಂಗಳೂರು ಪೊಲೀಸರು ಹಾಗೂ ಉಡುಪಿ ಪೊಲೀಸರು ಜಂಟಿಯಾಗಿ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಈ ಮೂಲಕ ಡ್ರಗ್ಸ್ ಬಗ್ಗೆ ಠಾಣೆಗೆ ಹೋಗಿ ದೂರು ನೀಡುವ ಬದಲು ಕೇವಲ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ದೂರು ದಾಖಲಾಗುತ್ತದೆ.
ಈಗಾಗಲೇ ಎರಡು ಜಿಲ್ಲೆಯ ಪೊಲೀಸರು ಈ ಕ್ಯೂ ಆರ್ ಕೋಡ್ ಅನ್ನು ಜಾರಿಗೊಳಿಸಿ ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಅಂಟಿಸಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತಿದ್ದು, ದೂರು ಯಾರು ನೀಡಿದರು ಎಂದು ಗೊತ್ತಾಗುವುದಿಲ್ಲ.




