ಕ್ರೈಸ್ತಚರ್ಚ್: ಅದ್ಯಾಕೋ ಪಾಕಿಸ್ತಾನ ಕ್ರಿಕೆಟ್ ತಂಡದ ಹಣೆಬರಹವೇ ಸರಿಯಿಲ್ಲ ಎನಿಸುತ್ತದೆ. 1800 ಕೋಟಿ ರೂಪಾಯಿ ಖರ್ಚು ಮಾಡಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿದರೂ ತವರಿನಲ್ಲಿ ಆಡಿದ್ದು ಕೇವಲ ಒಂದು ಪಂದ್ಯ ಮಾತ್ರ. ಭಾರತದ ವಿರುದ್ಧ ಹೀನಾಯ ಸೋಲಿನ ಬಳಿಕ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಬಿದ್ದು ಅವಮಾನ ಎದುರಿಸಿತ್ತು.
ಬಳಿಕ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದರೂ ನ್ಯೂಜಿಲೆಂಡ್ ವಿರುದ್ಧ ಮಕಾಡೆ ಮಲಗಿದೆ. ಪಾಕಿಸ್ತಾನ 5 ಟಿ20 ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲು ನ್ಯೂಜಿಲೆಂಡ್‌ಗೆ ಪ್ರಯಾಣಿಸಿದೆ. ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಏನೇ ಬದಲಾವಣೆ ಮಾಡಿದರೂ ಪಾಕಿಸ್ತಾನದ ಸೋಲಿನ ಹಣೆಬರಹ ಮಾತ್ರ ಬದಲಾಗಿಲ್ಲ.
ನ್ಯೂಜಿಲೆಂಡ್‌ನ ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಆಡಲು ಈಗಾಗಲೇ ಭಾರತಕ್ಕೆ ಬಂದಿದ್ದಾರೆ. ಪ್ರಮುಖ ಆಟಗಾರರು ಇಲ್ಲದಿದ್ದರೂ ನ್ಯೂಜಿಲೆಂಡ್ ಪಾಕಿಸ್ತಾನವನ್ನು 9 ವಿಕೆಟ್‌ಗಳಿಂದ ಸೋಲಿಸಿದ್ದು, ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. 91 ರನ್‌ಗಳಿಗೆ ಪಾಕಿಸ್ತಾನ ಆಲೌಟ್ ಕ್ರಿಸ್ಟ್‌ಚರ್ಚ್‌ನ ಹಾಗ್ಲಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಕೇವಲ 91 ರನ್‌ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕೈಲ್ ಜೇಮಿಸನ್ ಮತ್ತು ಜಾಕೊಬ್ ಡುಫಿ ಬೌಲಿಂಗ್ ದಾಳಿಯಿಂದ ಕಂಗೆಟ್ಟಿತು. ಖುಷ್ದಿಲ್ 32 ರನ್, ಸಲ್ಮಾನ್ ಆಘಾ 18 ರನ್ ಮತ್ತು ಜಹಾಂದದ್ ಖಾನ್ 17 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲಿಲ್ಲ. ಪಾಕಿಸ್ತಾನ 1 ರನ್ ಗಳಿಸುವ ವೇಳೆಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಕೈಲ್ ಜೇಮಿಸನ್ 4 ಓವರ್ ಗಳಲ್ಲಿ 1 ಮೇಡನ್ ಸಹಿತ 8 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಮಿಂಚಿದರು. ಜಾಕೊಬ್ ಡುಫಿ 3.4 ಓವರ್ ಗಳಲ್ಲಿ 14 ರನ್ ನೀಡಿ 4 ವಿಕೆಟ್ ಪಡೆದರು. ಇಶ್ ಸೋಧಿ 2 ವಿಕೆಟ್ ಪಡೆದರೆ, ಝಕಾರಿ 1 ವಿಕೆಟ್ ಪಡೆದುಕೊಂಡರು.