ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಫ್ರಾಂಚೈಸಿಯ ಮಾರುಕಟ್ಟೆ ವಿಭಾಗದ ನಿಖಿಲ್ ಸೋಸಲೆ ಬಂಧನವಾಗಿದೆ.
ಇದರ ಬೆನ್ನಲ್ಲೇ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು ಬಂಧಿಸುವಂತೆ ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟರ್‌ಗಳು ಹರಿದಾಡಲಾರಂಭಿಸಿದೆ. ಜತೆಗೆ ಟ್ವಿಟರ್ ಎಕ್ಸ್‌ನಲ್ಲಿಯೂ ‘ಅರೆಸ್ಟ್ ಕೊಹ್ಲಿ’ ಎನ್ನುವ ಹ್ಯಾಶ್ ಟ್ಯಾಗ್ ಭಾರೀ ಟ್ರೆಂಡಿಂಗ್ ಆಗಿದೆ.
ಆರ್‌ಸಿಬಿಯ ಚೊಚ್ಚಲ ಟ್ರೋಫಿ ಗೆಲುವನ್ನು ವಿರಾಟ್ ಕೊಹ್ಲಿಯ ಗೆಲುವೆಂದೇ ಬಣ್ಣಿಸಲಾಗಿತ್ತು. ಕಳೆದ 18 ವರ್ಷಗಳಿಂದ ಆರ್‌ಸಿಬಿ ಪರ ಆಡಿದ್ದ ಕೊಹ್ಲಿಗಾಗಿ ಕಪ್ ಗೆಲ್ಲುವ ಮೂಲಕ ಅವರಿಗೆ ಗೌರವ ಸೋಚಿಸಲಾಗಿದೆ ಎಂದು ಅಭಿಮಾನಿಗಳು ಹೇಳಿದ್ದರು.
ಆದರೆ ಅಭಿಮಾನಿಗಳು ಸಾವನ್ನಪ್ಪಿದ್ದರೂ ಕೂಡ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಸಿದ್ದರ ಬಗ್ಗೆ ಇದೀಗ ಸ್ವತಃ ಆರ್‌ಸಿಬಿ ಅಭಿಮಾನಿಗಳೇ ಫ್ರಾಂಚೈಸಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಭಿಮಾನಿಗಳ ಸಾವಿಗಿಂತ ನಿಮಗೆ ಸಂಭ್ರಮಾಚರಣೆಯೇ ಮುಖ್ಯವಾಯಿತಾ? ಎಂದು ಪ್ರಶ್ನಿಸಲಾರಂಭಿಸಿದ್ದಾರೆ.
ವಿರಾಟ್ ಕೊಹ್ಲಿಯನ್ನೇ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಬಂದಿದ್ದರು. ಆದರೆ ಅವರು ಅಭಿಮಾನಿಗಳ ಸಾವಿನ ಮಧ್ಯೆಯೂ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕೆಲ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
ಕೆಲ ನೆಟ್ಟಿಗರು, ಕೊಹ್ಲಿ ಕೈದಿಯ ಪೋಷಾಕು ಧರಿಸಿರುವಂತೆ ಇರುವ ಫೋಟೊ ಎಡಿಟ್ ಮಾಡಿ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಚೊಚ್ಚಲ ಐಪಿಎಲ್ ಪ್ರಶಸ್ತಿಯ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರೋಡ್ ಶೋ ಆಯೋಜಿಸುವ ಬಗ್ಗೆ ಆರ್‌ಸಿಬಿ ಮಾಹಿತಿ ನೀಡಿತ್ತು.
ಆದರೆ, ಭದ್ರತೆಯ ಕಾರಣ ಅದನ್ನು ರದ್ದುಗಳಿಸಲಾಯಿತು ಹಾಗೂ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತ್ರ ವಿಜಯೋತ್ಸವವನ್ನು ನಡೆಸಲಾಗಿತ್ತು.
ಇದಕ್ಕೂ ಮುನ್ನ ಆರ್‌ಸಿಬಿ ಆಟಗಾರರಿಗೆ ವಿಧಾನಸೌಧದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮೈಸೂರು ಪೇಟ ತೊಡಸಿ ಗೌರವಿಸಲಾಗಿತ್ತು.
ಪೊಲೀಸರಿಗೆ ಸರಿಯಾದ ಮಾಹಿತಿ ನೀಡದೆ ಉಚಿತ ಪಾಸ್ ನೀಡುವುದಾಗಿ ಹೇಳಿ ಲಕ್ಷಾಂತರ ಅಭಿಮಾನಿಗಳು ಸೇರುವಂತೆ ಮಾಡಿ ಗೊಂದಲ ಸೃಷ್ಟಿಸಿ, ಕಾಲ್ತುಳಿತದಲ್ಲಿ 11 ಮಂದಿ ಮೃತರಾಗಲು ಆರ್‌ಸಿಬಿ ಫ್ರಾಂಚೈಸಿ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾ ಡಿದ್ದಾರೆ.




