ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಲೋಕಸಭೆಯ ಮುಖ್ಯ ಸಚೇತಕ ಹಾಗೂ 16 ಸಚೇತಕರನ್ನು ನೇಮಕ ಮಾಡಿದೆ. ಕರ್ನಾಟಕದ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.
ಬಿಜೆಪಿ ಸಂಸದೀಯ ಮಂಡಳಿ ಕಾರ್ಯದರ್ಶಿ ಶಿವಶಕ್ತಿನಾಥ ಭಕ್ಷಿ ಅವರು ಆದೇಶ ಹೊರಡಿಸಿದ್ದು, ಡಾ.ಸಂಜಯ್ ಜೈಸ್ವಾಲ್ ಅವರನ್ನು ಲೋಕಸಭೆಯ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.
ಉಡುಪಿ -ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ 16 ಮಂದಿ ಸಚೇತಕರನ್ನು ನೇಮಕ ಮಾಡಲಾಗಿದೆ. ರಾಷ್ಟ್ರ ರಾಜಕಾರಣಕ್ಕೆ ತೆರಳಿದ ಕೋಟ ಶ್ರೀನಿವಾಸ ಪೂಜಾರಿ ಮಹತ್ವದ ಹುದ್ದೆ ನೀಡಲಾಗಿದೆ.
ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳಿಯು ನನ್ನನ್ನು ಲೋಕಸಭಾ ಸಚೇತಕ ಹುದ್ದೆಗೆ ಪರಿಗಣಿಸಿ ಆಯ್ಕೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾರವರಿಗೆ ಹಾಗೂ ಪಕ್ಷದ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಚಿವರಾಗಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ, ಪಕ್ಷ ಸಂಘಟನೆಗೆ ಅನನ್ಯ ಕೊಡುಗೆ ನೀಡಿರುವ ಕೋಟಾ ಶ್ರೀನಿವಾಸ ಪೂಜಾರಿ ಲೋಕಸಭೆ ಸಚೇತಕರಾಗಿಯೂ ಉತ್ತಮ ಜವಾಬ್ದಾರಿ ನಿರ್ವಹಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶುಭ ಹಾರೈಸಿದ್ದಾರೆ.