Ad imageAd image

ಕೌಜಲಗಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ , ಕಿರು ಕೋಟೆ ಅನಾವರಣ

Bharath Vaibhav
ಕೌಜಲಗಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ , ಕಿರು ಕೋಟೆ ಅನಾವರಣ
WhatsApp Group Join Now
Telegram Group Join Now

ಬೆಳಗಾವಿ:-ದೇಶಕ್ಕೆ ಸಂಗೊಳ್ಳಿ ರಾಯಣ್ಣನ ಕೊಡುಗೆ ಅವಿಸ್ಮರಣೀಯ: ಮುಖ್ಯಮಂತ್ರಿ ಸಿದ್ದರಾಮಯ್ಯ.

ಆ.26(ಕರ್ನಾಟಕ ವಾರ್ತೆ): ಗೋಕಾಕ ತಾಲ್ಲೂಕಿನ ಕೌಜಲಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಹಾಗೂ ಕಲ್ಲಿನ ಕಿರು ಕೋಟೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಆ.26) ಅನಾವರಣಗೊಳಿಸಿದರು.

ಇದೇ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಏಕ ಕಾಲಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಲ್ಕು ಪ್ರತಿಮೆಗಳನ್ನು ಅನಾವರಣಗೊಳಿಸುತ್ತಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದಲ್ಲಿ ಸೈನಿಕನಾಗಿ, ರಾಣಿ ಚನ್ನಮ್ಮ ಬಲಗೈ ಬಂಟನಾಗಿ ಕಿತ್ತೂರು ಸಂಸ್ಥಾನದ ಉಳಿವಿಗೆ ಬ್ರಿಟಿಷ್ ವಿರುದ್ಧ ಹೋರಾಡಿದ ಮಹಾನ್ ಚೇತನ, ಅತ್ಯಂತ ಪರಾಕ್ರಮಿ ಧೈರ್ಯಶಾಲಿ ಯೋಧರಾಗಿದ್ದರು.ಕಿತ್ತೂರು ಸಂಸ್ಥಾನ ಬ್ರಿಟಿಷ್ ವಿರುದ್ಧ ಮೊದಲ ಯುದ್ಧದಲ್ಲಿ ಜಯ ಗಳಿಸಿತ್ತು. ಬಳಿಕ ನಮ್ಮವರ ಕುತಂತ್ರದಿಂದ ಎರಡನೇ ಬಾರಿ ಕಿತ್ತೂರಿಗೆ ಸೋಲಾಗುತ್ತದೆ. ಸೋಲಿನ ಬಳಿಕ ರಾಣಿ ಚನ್ನಮ್ಮ ಅವರನ್ನು ಬ್ರಿಟಿಷರು ಸೆರೆವಾಸದಲ್ಲಿ ಇಡುತ್ತಾರೆ.

ಆದರೆ ಅದಕ್ಕೆ ಬಗ್ಗದೆ ಸಂಗೊಳ್ಳಿ ರಾಯಣ್ಣ ಬ್ರಿಟಿಷ್ ವಿರುದ್ಧ ಏಕಾಂಗಿ ಹೋರಾಟವನ್ನು ಮುಂದುವರೆಸುತ್ತಾರೆ. ಸಂಗೊಳ್ಳಿ ರಾಯಣ್ಣ ಮಹಾನ್ ದೇಶಪ್ರೇಮಿ. ರಾಯಣ್ಣನ ದೇಶಪ್ರೇಮ ನಮ್ಮೆಲ್ಲರಿಗೂ ಪ್ರೇರಣೆದಾಯಕ. ಅವರ ಹೆಸರು ಸದಾ ನಮ್ಮೊಂದಿಗೆ ಇರಬೇಕು. ಈ ನಿಟ್ಟಿನಲ್ಲಿ ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ಹಾಗೂ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ.

ಮುಂದಿನ ಪೀಳಿಗೆ ಸಂಗೊಳ್ಳಿ ರಾಯಣ್ಣ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು. ಉತ್ತಮ ಪ್ರಜೆಗಳಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಅರಭಾವಿ ಶಾಸಕರು ಹಾಗೂ ಕೆ.ಎಂ.ಎಫ್. ನಿರ್ದೇಶಕರಾದ ಬಾಲಚಂದ್ರ ಜಾರಕಿಹೊಳಿ, ರಾಮದುರ್ಗ ಶಾಸಕ, ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮತ್ತಿತರರು ಉಪಸ್ಥಿತರಿದ್ದರು.

ತೆರೆದ ವಾಹನದಲ್ಲಿ ಸಿಎಂ ಸಂಚಾರ:ಇದಕ್ಕೂ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರೆದ ವಾಹನದಲ್ಲಿ ಕೌಜಲಗಿ ಗ್ರಾಮದ ಪ್ರಾರಂಭದ ಬೀದಿಯಿಂದ ಗ್ರಾಮದಲ್ಲಿ ನಿರ್ಮಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯವರೆಗೂ ಸಂಚರಿಸಿದರು.

ಮೆರವಣಿಗೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇಷದಾರಿ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಹಾಗೂ ಕುಂಭಮೇಳದಲ್ಲಿ ಸಾವಿರಾರು ಕುಂಭ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದರು. ಕೌಜಲಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!