ಬೆಂಗಳೂರು: ಪೆನ್ ಡ್ರೈವ್ ಬಿಡುಗಡೆ ಹಿಂದೆ ದೊಡ್ಡ ತಿಮಿಂಗಿಲವಿದೆ. ಪೆನ್ ಡ್ರೈವ್ ಹಂಚಿದವರ ವಿರುದ್ಧ ಎಸ್‌ಐಟಿ ಇನ್ನೂ ಕ್ರಮ ಕೈಗೊಂಡಿಲ್ಲ. ಯಾರೊಬ್ಬರನ್ನೂ ಬಂಧಿಸಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಎಸ್‌ಐಟಿ ತನಿಖೆಯ ವರದಿ ಶಾಸಕರಿಗೆ ಸರಬರಾಜಾಗುತ್ತಿದೆಯೇ?ಎಂಬ ಅನುಮಾನವಿದೆ. ಪೆನ್ ಡ್ರೈವ್ ಹಿಂದೆ ದೊಡ್ಡ ತಿಮಿಂಗಿಲವಿದೆ.
ಆ ತಿಮಿಂಗಿಲ ಯಾರೆಂದು ರಾಜ್ಯದ ಜನತೆಗೂ ಗೊತ್ತಿದೆ. ಅದು ಸರ್ಕಾರದಲ್ಲಿಯೇ ಇದೆ. ಆ ತಿಮಿಂಗಿಲ ಹಿಡಿದರೆ ಎಲ್ಲವೂ ಗೊತ್ತಾಗುತ್ತದೆ. ದೊಡ್ಡ ತಿಮಿಂಗಿಲ ಬಿಟ್ಟು ಇವರು ಸಣ್ಣ ಪುಟ್ಟದ್ದನ್ನು ಹಿಡಿಯಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಿಮಿಂಗಿಲದ ಆಡಿಯೋ ಬಿಟ್ಟದ್ದಕ್ಕೇ ಕೇಸ್ ಆಯ್ತು. ಆಡಿಯೋ ಬಿಟ್ಟವರ ಮೇಲೆಯೇ ಕೇಸ್ ಹಾಕಿ ಕೂರಿಸಿದ್ದಾರೆ. ಅವರ್ಯಾರೋ ದೆಹಲಿಗೆ ತೆರಳಿ ದಾಖಲೆ ಬಿಡಿಗಡೆಗೆ ಹೊರಟಿದ್ದರು ಎಂದು ಆತನನ್ನು ಹಿಡಿಯಲಾಗಿದೆ.
ಯಾವ ದಾಖಲೆ ಬಿಡುಗಡೆಗೆ ಹೊರಟಿದ್ದರು? ಅವರನ್ನು ಹಿಡಿದು ಇವರು ಯಾವ ದಾಖಲೆ ವಶಪಡಿಸಿಕೊಳ್ಳಲು ಹೊರಟಿದ್ದಾರೆ? ಎಂಬುದೆಲ್ಲವೂ ಚರ್ಚೆಯಾಗಬೇಕಲ್ಲವೇ? ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ನೋಡಿ ಎಂದು ಕಿಡಿಕಾರಿದ್ದಾರೆ.