ತುರುವೇಕೆರೆ : ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಪ್ರಾರಂಭವಾಗಿದ್ದು, ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವಂತಹ 21 ವರ್ಷ ಮೇಲ್ಪಟ್ಟ ಪದವೀಧರರೆಲ್ಲರೂ ಅರ್ಜಿಯೊಂದಿಗೆ ಸಂಬಂಧಪಟ್ಟ ದಾಖಲೆ ಸಲ್ಲಿಸಿ ನವೆಂಬರ್ 06 ರೊಳಗೆ ನೋಂದಣಿಯಾಗಬೇಕೆಂದು ತಹಸೀಲ್ದಾರ್, ಸಹಾಯಕ ಮತದಾರರ ನೋಂದಣಾಧಿಕಾರಿ ಕುಂಇ ಅಹಮದ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಯ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯನ್ನು ತಯಾರಿಸುವ ಸಂಬಂಧ ಆಯೋಗದಿಂದ ಈಗಾಗಲೇ ವೇಳಾಪಟ್ಟಿಯನ್ನು ಹೊರಡಿಸಲಾಗಿದೆ. ಸೆಪ್ಟಂಬರ್ 30 ರಿಂದ ನಮೂನೆ 18 ಅನ್ನು ಪಡೆದುಕೊಳ್ಳುವ ಕಾರ್ಯ ಆರಂಭವಾಗಿದ್ದು, ಹೊಸದಾಗಿ ಮತದಾರರ ಪಟ್ಟಿಯನ್ನು ತಯಾರಿಸಬೇಕಿರುವ ಕಾರಣ ಎಲ್ಲಾ ಅರ್ಹ ಮತದಾರರು ಹೊಸದಾಗಿಯೇ ನಮೂನೆ 18 ರಲ್ಲಿ ವಿವರ ಭರ್ತಿ ಮಾಡಿ ನಿಗದಿಪಡಿಸಿರುವ ಅಧಿಕೃತ ನಿಯೋಜಿತ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 06 ರೊಳಗೆ ಸಲ್ಲಿಸಬೇಕಿದೆ. ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಕರಡು ಪಟ್ಟಿಯನ್ನು ನವೆಂಬರ್ 25ರಂದು ಹಾಗೂ ಅಂತಿಮ ಪಟ್ಟಿಯನ್ನು 2025 ರ ಡಿಸೆಂಬರ್ 30 ರಂದು ಪ್ರಚುರಪಡಿಸುವುದಾಗಿ ಮತ್ತು ಕರಡು ಮತದಾರರ ಪಟ್ಟಿ ಪ್ರಚುರಪಡಿಸಿದ ನಂತರ ನವೆಂಬರ್ 25 ರಿಂದ ಅಕ್ಟೋಬರ್ 10 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.
ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ (ಹರಿಹರ, ಜಗಳೂರು, ದಾವಣಗೆರೆ ತಾಲೂಕು ಮಾತ್ರ) ಜಿಲ್ಲೆಗಳು ಒಳಪಟ್ಟಿವೆ. ತುಮಕೂರು ಜಿಲ್ಲೆಗೆ ಸಹಾಯಕ ನೋಂದಣಾಧಿಕಾರಿಗಳಾಗಿ ತುಮಕೂರು ಜಿಲ್ಲಾಧಿಕಾರಿಗಳು, ತುರುವೇಕೆರೆ ತಾಲ್ಲೂಕಿಗೆ ಸಹಾಯಕ ನೋಂದಣಾಧಿಕಾರಿಗಳಾಗಿ ಜಿ.ಎನ್.ಮಂಜುನಾಥ್ (ವಿಶೇಷ ಭೂಸ್ವಾಧೀನಾಧಿಕಾರಿಗಳು), ಕುಂಇ ಅಹಮದ್ (ತುರುವೇಕೆರೆ ತಹಸೀಲ್ದಾರ್) ಅವರನ್ನು ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ ಅರ್ಜಿ ಸ್ವೀಕರಿಸಲು ನಿಯೋಜಿತ ಅಧಿಕಾರಿಯಾಗಿ ಸುಮತಿ (ಗ್ರೇಡ್ 2 ತಹಸೀಲ್ದಾರ್) ಹಾಗೂ ಹೆಚ್ಚುವರಿ ನಿಯೋಜಿತ ಅಧಿಕಾರಿಯಾಗಿ ಸೋಮಶೇಖರ್ (ಕ್ಷೇತ್ರ ಶಿಕ್ಷಣಾಧಿಕಾರಿಗಳು) ಅವರನ್ನು ಚುನಾವಣಾ ಆಯೋಗ ನಿಯೋಜಿಸಿ ಆದೇಶಿಸಿದೆ ಎಂದರು.
ಮತದಾರರಿಗೆ ಅರ್ಜಿ ಸ್ವೀಕರಿಸಲು ಮತ್ತು ಸಲ್ಲಿಸಲು ಅನುಕೂಲವಾಗುವಂತೆ ತುರುವೇಕೆರೆ ತಾಲ್ಲೂಕು ಕಛೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿ ಕೇಂದ್ರವನ್ನು ತೆರೆಯಲಾಗಿದೆ. ಪದವಿ ಪಡೆದು ಮೂರು ವರ್ಷವಾಗಿರುವ ಎಲ್ಲಾ ಪದವೀಧರರು, ಪದವಿ ಪಡೆದಿರುವ ಎಲ್ಲಾ ನೌಕರರು, ಆರೋಗ್ಯ ಇಲಾಖೆಯ ವೈದ್ಯರುಗಳು, ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ಉಪನ್ಯಾಸಕರುಗಳು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಮತದಾರರ ನೋಂದಣಿ ಕೇಂದ್ರದಲ್ಲಿ ನಮೂನೆ 18 ಅರ್ಜಿಯನ್ನು ನೀಡಲಾಗುತ್ತದೆ. 2025 ನವೆಂಬರ್ 01 ರ ವೇಳೆಗೆ ಮೂರು ವರ್ಷಕ್ಕೂ ಮೊದಲು ಪದವೀಧರರಾಗಿರಬೇಕು, ಅಂತಹವರು ಮತದಾರರ ಪಟ್ಟಿಯನ್ನು ತಮ್ಮ ಹೆಸರನ್ನು ನೋಂದಣಿ ಮಾಡಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, 2025 ನವೆಂಬರ್ 01 ರಿಂದ ಹಿಂದಿನ ಮೂರು ವರ್ಷಕ್ಕೆ (01-11-2022) ಪಡೆದ ಘಟಿಕೋತ್ಸವದ (ಕಾನ್ವೋಕೇಷನ್) ಪ್ರಮಾಣ ಪತ್ರ ಅಥವಾ ಎಲ್ಲಾ ವರ್ಷದ ಸೆಮಿಸ್ಟರ್ ಅಂಕಪಟ್ಟಿಯನ್ನು ನಮೂನೆ 18ರ ಜೊತೆಗೆ ತುರುವೇಕೆರೆ ತಾಲ್ಲೂಕು ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಾರಂಭಿಸಲಾಗಿರುವ ಮತದಾರರ ನೋಂದಣಿ ಕೇಂದ್ರಕ್ಕೆ 2025 ರ ನವೆಂಬರ್ 06 ನೇ ತಾರೀಖಿನೊಳಗೆ ಸಲ್ಲಿಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಹಾಗೂ ಮತದಾರರ ನೋಂದಣಿಗೆ ಸಂಬಂಧಿಸಿದ ಸಹಾಯಕ್ಕೆ ನಿಯೋಜಿತ ಅಧಿಕಾರಿಗಳಾದ ಸುಮತಿ ಬಿ.ಸಿ. (ಮೊ: 9611181296) ಹಾಗೂ ಹೆಚ್ಚುವರಿ ನಿಯೋಜಿತ ಅಧಿಕಾರಿ ಎನ್.ಸೋಮಶೇಖರ್ (ಮೊ: 9480695361 ) ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಗೋಷ್ಟಿಯಲ್ಲಿ ಸಹಾಯಕ ನೋಂದಣಾಧಿಕಾರಿ ಜಿ.ಎನ್.ಮಂಜುನಾಥ್, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಬ್ಯಾಂಕ್ ವ್ಯವಸ್ಥಾಪಕರು, ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




