———————————————–ರಂಗಕಲೆ ನಾಡಿನ ಸಂಸ್ಕೃತಿಯ ಪ್ರತೀಕ : ಅಮಾನಿಕೆರೆ ಮಂಜುನಾಥ್
ತುರುವೇಕೆರೆ : ಪಟ್ಟಣದ ಶ್ರೀ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಹಿರಿಯ ರಂಗಕಲಾವಿದ ದೇವೀಹಳ್ಳಿ ಮಂಜಣ್ಣನವರ ಜನ್ಮದಿನದ ಅಂಗವಾಗಿ ಶ್ರೀ ಸತ್ಯಗಣಪತಿ ಆಸ್ಥಾನ ಮಂಪಟದಲ್ಲಿ ಆಯೋಜಿಸಿದ್ದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ನಾಟಕ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ನಾಟಕ ಪ್ರದರ್ಶನದ ಅಧ್ಯಕ್ಷತೆ ವಹಿಸಿದ್ದ ಶಿವಶಕ್ತಿ ಕಲಾವಿದರು ಸಂಸ್ಥೆಯ ಅಧ್ಯಕ್ಷ ಟಿ.ಎನ್.ಮಂಜುನಾಥ್ (ಅಮಾನಿಕೆರೆ) ಮಾತನಾಡಿ, ರಂಗಕಲೆ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಲ್ಲಿ ನಮ್ಮ ನಾಡಿನ ಪಾರಂಪರಿಕ ಕಲೆ, ಸಂಸ್ಕೃತಿ, ಆಚಾರ, ವಿಚಾರ, ರಂಗಕಲೆ, ನಾಟಕ, ರಂಗಭೂಮಿಗಳೆಡೆಗೆ ಯುವ ಸಮೂಹವನ್ನು ಆಕರ್ಷಿಸುವ ನಿಟ್ಟಿನಲ್ಲಿ ನಾಡಿನ ಸಾಂಸ್ಕೃತಿಕ, ಐತಿಹಾಸಿಕ ರಂಗಕಲೆಯ ರಾಯಭಾರಿಗಳೆನಿಸಿಕೊಂಡಿರುವ ನಾವುಗಳು ರಂಗಭೂಮಿಯ ಉಳಿವಿಗಾಗಿ ಶ್ರಮಿಸಬೇಕಿದೆ. ರಂಗಭೂಮಿಯ ನಾಟಕ ಪ್ರದರ್ಶನದಲ್ಲಿ ಯುವ ಪ್ರತಿಭಾವಂತ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ರಂಗಭೂಮಿಯ ಸಾರ್ವಭೌಮತೆಯನ್ನು ಎತ್ತಿ ಹಿಡಿದು ಮೆರೆಸಬೇಕಿದೆ ಎಂದರು.

ಜನ್ಮದಿನ ಆಚರಿಸಿಕೊಂಡ ಹಿರಿಯ ರಂಗಭೂಮಿ ಕಲಾವಿದ ದೇವೀಹಳ್ಳಿ ಮಂಜಣ್ಣ ಮಾತನಾಡಿ, ಆಧುನಿಕತೆ, ಮೊಬೈಲ್, ಸಾಮಾಜಿಕ ಜಾಲತಾಣಗಳ ನಡುವೆ ರಂಗಕಲೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿಯ ಚಟುವಟಿಕೆಗಳು ನಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ. ರಂಗಭೂಮಿಯಲ್ಲಿ ಪ್ರದರ್ಶಿತವಾಗುವ ನಾಟಕಗಳು ಕೇವಲ ಮನರಂಜನೆ ನೀಡುವುದು ಮಾತ್ರವಲ್ಲದೆ ಜೀವನದ ಮೌಲ್ಯವನ್ನು ತಿಳಿಸುತ್ತದೆ ಎಂದರು.
ಶ್ರೀ ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಪಪಂ ಸದಸ್ಯ ಚಿದಾನಂದ್ ಉದ್ಘಾಟಿಸಿದರು. ನೆಮ್ಮದಿ ಗ್ರಾಮದ ಸಿ.ಎಸ್.ಮೂರ್ತಿ, ಪಪಂ ಅಧ್ಯಕ್ಷೆ ಸ್ವಪ್ನನಟೇಶ್, ಟೌನ್ ಸಹಕಾರ ಸಂಘದ ಅಧ್ಯಕ್ಷ ರಾಮೇಗೌಡ, ಪಪಂ ಸದಸ್ಯ ಎನ್.ಆರ್.ಸುರೇಶ್, ವಕೀಲ ನಾಗೇಶ್, ನಾಟಕ ಆಯೋಜಕ ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕುರುಕ್ಷೇತ್ರ ನಾಟಕ ಪ್ರದರ್ಶನದಲ್ಲಿ ಕ್ಯಾಮಸಂದ್ರ ಚಂದ್ರಮೂರ್ತೀ ಸಂಗೀತ ನಿದೇರ್ಶನ ಮಾಡಿದರು. ಶ್ರೀಕೃಷ್ಣನ ಪಾತ್ರದಾರಿಯಾಗಿ ಟಿ.ಎಸ್.ರಾಘವೇಂದ್ರ, ದೃತರಾಷ್ಟ್ರನಾಗಿ ಸಂತೋಷ್, ದುಯೋಧನನಾಗಿ ಕುಮಾರಸ್ವಾಮಿ, ದುಶ್ಯಾಸನನಾಗಿ ಗೋವಿಂದರಾಜು, ಕರ್ಣನಾಗಿ ಗಿರೀಶ್, ಧರ್ಮನಾಗಿ ಶಿವಲಿಂಗಪ್ಪ, ಭೀಮನಾಗಿ ಕುಮಾರ್, ಅರ್ಜುನನಾಗಿ ಸಂತೋಷ್, ದ್ರೌಪದಿಯಾಗಿ ನಾಗಮಣಿ, ರುಕ್ಮಿಣಿಯಾಗಿ ಚೈತ್ರ, ಗಾಂಧಾರಿ, ಕುಂತಿಯಾಗಿ ರಾಜೇಶ್ವರಿ ಅಭಿನಯಿಸಿದ್ದರು. ಕುರುಕ್ಷೇತ್ರ ನಾಟಕದ ಪ್ರತಿಯೊಂದು ಪಾತ್ರವೂ ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




