ಪ್ರತೀ ವರ್ಷ ಮಾರ್ಚ್ 8ರಂದು, ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತೇವೆ. ಮಹಿಳಾ ಹಕ್ಕುಗಳು ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸಲು ಮೀಸಲಾಗಿರುವ ದಿನ. 1,900ರ ದಶಕದ ಆರಂಭದಲ್ಲಿ ಮೊದಲ ಬಾರಿಗೆ ಈ ದಿವನ್ನು ಆಚರಿಸಲಾಯಿತು. ಪ್ರತೀ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ.
ಸಿನಿಮಾ ಎಂಬ ಗ್ಲ್ಯಾಮರ್ ಲೋಕದಲ್ಲಿ ಭದ್ರ ಸ್ಥಾನ ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ವಿಶೇಷವಾಗಿ ಮಹಿಳಾ ಕಲಾವಿದರಿಗೆ. ಟೀಕೆ, ಟ್ರೋಲ್ಗಳಂತಹ ಸಮಸ್ಯೆಗಳು ಇದ್ದೇ ಇರುತ್ತದೆ. ವೃತ್ತಿಜೀವನದ ಜೊತೆಗೆ ಅವರ ವೈಯಕ್ತಿಕ ವಿಚಾರಗಳು ಕೂಡಾ ವ್ಯಾಪಕವಾಗಿ ಸದ್ದು ಮಾಡುತ್ತವೆ. ಗೌಪ್ಯತೆ ಅನ್ನೋದು ಇಲ್ಲಿ ಸವಾಲೇ ಸರಿ. ಒಂದು ಸಿನಿಮಾ ಗೆದ್ದ ಕೂಡಲೇ ಅವರ ವೃತ್ತಿಜೀವನ ಗಟ್ಟಿಯಾಗಿದೆ ಎಂದು ಹೇಳಲು ಬರೋದಿಲ್ಲ. ಯಶಸ್ಸಿನಾದಿಯಲ್ಲಿ ಮುಂದುವರೆಯೋದಕ್ಕೆ ಸಾಕಷ್ಟು ಶ್ರಮ ಹಾಕಲೇಬೇಕು. ಹೀಗೆ ಏರಿಳಿತಗಳನ್ನು ಎದುರಿಸಿ ಹಲವು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಭದ್ರ ಸ್ಥಾನ ಹೊಂದಿರುವ ನಟಿಮಣಿಯರ ಪೈಕಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕೂಡಾ ಒಬ್ಬರು.
‘ಕಿರಿಕ್ ಪಾರ್ಟಿ‘ ಮೂಲಕ ವೃತ್ತಿಜೀವನ ಆರಂಭ: 2016ರ ಡಿಸೆಂಬರ್ 30ರಂದು ತೆರೆಕಂಡ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ನಟನಾ ವೃತ್ತಿಜೀವನ ಆರಂಭಿಸಿದರು. ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ತೆರೆಹಂಚಿಕೊಂಡಿದ್ದರು. 4 ಕೋಟಿ ರೂಪಾಯಿ ಬಜೆಟ್ನ ಈ ಚಿತ್ರ ಆ ದಿನಗಳಲ್ಲೇ ಬರೋಬ್ಬರಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಎಂದು ವರದಿಯಾಗಿದೆ. ತಮ್ಮ ಚೊಚ್ಚಲ ಚಿತ್ರದಲ್ಲೇ ಅದ್ಭುತ ಯಶಸ್ಸು ಕಂಡ ರಶ್ಮಿಕಾ ಮಂದಣ್ಣ ನಂತರದ ದಿನಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡರು.
ದಕ್ಷಿಣ ಚಿತ್ರರಂಗದಲ್ಲಿ ಜನಪ್ರಿಯತೆ: ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಪಾತ್ರ ನಿರ್ವಹಿಸಿದ್ದ ರಶ್ಮಿಕಾ ನ್ಯಾಷನಲ್ ಕ್ರಶ್ ಎಂದೇ ಫೇಮಸ್ ಆದ್ರು. ಈ ಚಿತ್ರವು ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ದಾರಿ ಮಾಡಿಕೊಟ್ಟಿತು. ಬಹುಭಾಷಾ ನೆಲದಲ್ಲೂ ಅತಿ ಶೀಘ್ರದಲ್ಲೇ ಮನೆ ಮಾತಾದರು. ಕಮರ್ಷಿಯಲ್ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆಯುವಂತಹ ಪಾತ್ರಗಳಲ್ಲಿ ಕಾಣಿಸಿಕೊಂಡರು. ಸಿನಿಮಾದಿಂದ ಸಿನಿಮಾಗೆ ಅವರ ಅಭಿನಯ ಮತ್ತಷ್ಟು ಉತ್ತಮವಾಗುತ್ತಾ ಹೋಯ್ತು. ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದರು. ತೆಲುಗಿನ ಗೀತಾ ಗೋವಿಂದಂ (2018) ಮತ್ತು ಡಿಯರ್ ಕಾಮ್ರೇಡ್ (2019)ನಂತಹ ಚಲನಚಿತ್ರಗಳು ದಕ್ಷಿಣ ಚಲನಚಿತ್ರೋದ್ಯಮದ ಪ್ರಮುಖ ನಟಿಯರ ಪಟ್ಟಿಯಲ್ಲಿ ಅವರಿಗೆ ಸ್ಥಾನ ತಂದುಕೊಟ್ಟವು.
ವೃತ್ತಿಜೀವನದಲ್ಲಿ ಮೈಲಿಗಲ್ಲು ಸೃಷ್ಟಿಸಿದ ಪುಷ್ಪ: ಸುಕುಮಾರ್ ನಿರ್ದೇಶಿಸಿದ್ದ ‘ಪುಷ್ಪ: ದಿ ರೈಸ್’ ಚಿತ್ರವು ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನದಲ್ಲಿ ಮೈಲಿಗಲ್ಲೆನ್ನಬಹುದು. 2021ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಜೊತೆ ಶ್ರೀವಲ್ಲಿ ಪಾತ್ರ ನಿರ್ವಹಿಸಿದ್ದು, ಇದು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರಂತಹ ಖ್ಯಾತ ನಟನ ಎದುರು, ಕಠಿಣ ಹಳ್ಳಿ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದು, ವ್ಯಾಪಕ ಪ್ರಶಂಸೆ ಸ್ವೀಕರಿಸಿತು. ಅಲ್ಲು ಅರ್ಜುನ್ ಜೊತೆಗಿನ ಆನ್-ಸ್ಕ್ರೀನ್ ಕೆಮಿಸ್ಟ್ರಿ ಸಾಕಷ್ಟು ಮೆಚ್ಚುಗೆ ಸ್ವೀಕರಿಸಿತು. ಅಂತಹ ಹೈ ಪ್ರೊಫೈಲ್ ಪ್ರಾಜೆಕ್ಟ್ನಲ್ಲಿ ಕಠಿಣ ಪಾತ್ರವೊಂದನ್ನು ನಿರ್ವಹಿಸಿ ಯಶಸ್ಸಿನಾದಿಯನ್ನು ಮುಂದುವರಿಸಿದರು.
ಬಾಲಿವುಡ್ಗೆ ಎಂಟ್ರಿ: ರಶ್ಮಿಕಾ ಮಂದಣ್ಣ ಅವರ ಸಕ್ಸಸ್ ಸೌತ್ ಸಿನಿಮಾ ಇಂಡಸ್ಟ್ರಿಯ ಆಚೆಗೂ ವಿಸ್ತರಿಸಿತು. 2022ರಲ್ಲಿ ಗುಡ್ ಬೈ, 2023ರಲ್ಲಿ ಮಿಷನ್ ಮಜ್ನುನಂತಹ ಚಿತ್ರಗಳೊಂದಿಗೆ ಬಾಲಿವುಡ್ ಪ್ರಯಾಣ ಪ್ರಾರಂಭಿಸಿದರು. ಸಿದ್ಧಾರ್ಥ್ ಮಲ್ಹೋತ್ರಾ, ಅಮಿತಾಭ್ ಬಚ್ಚನ್ ಅವರಂತಹ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡರು. ಮೊದಲ ಬಾಲಿವುಡ್ ಸಿನಿಮಾ ಸದ್ಯಕ್ಕಿರುವ ಕ್ರೇಜ್ ತಂದುಕೊಡಲಿಲ್ಲವಾದರೂ, ಪ್ಯಾನ್-ಇಂಡಿಯನ್ ತಾರೆಯಾಗಿ ಅವರ ಸ್ಥಾನವನ್ನು ಭದ್ರಪಡಿಸಿತು.
ಇನ್ಸ್ಟಾಗ್ರಾಮ್ನಲ್ಲಿ 45.2 ಮಿಲಿಯನ್ ಫಾಲೋವರ್: ಅಮೋಘ ಅಭಿನಯದಿಂದ ಮಾತ್ರವಲ್ಲದೇ, ತಮ್ಮ ಸಹಜ ಸೌಂದರ್ಯ, ಸರಳ ವ್ಯಕ್ತಿತ್ವ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರೋ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಫೇಮಸ್ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ ಇನ್ಸ್ಟಾಗ್ರಾಮ್ನಲ್ಲಿ 45.2 ಮಿಲಿಯನ್ ಫಾಲೋವರ್ಗಳನ್ನು ಸಂಪಾದಿಸಿದ್ದಾರೆ.
ಧೂಳೆಬ್ಬಿಸಿದ ಅನಿಮಲ್, ಛಾವಾ: ಬಾಲಿವುಡ್ನ ಆರಂಭದ ಸಿನಿಮಾಗಳು ಧೂಳೆಬ್ಬಿಸದಿದ್ದರೂ ನಂತರ ಬಂದ ಅನಿಮಲ್ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಯಿತು. ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದರಾದರೂ, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ವ್ಯವಹಾರ ನಡೆಸಿತು. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಕ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸರಿಸುಮಾರು 100 ಕೋಟಿ ರೂಪಾಯಿ ಬಜೆಟ್ನ ಚಿತ್ರ ಜಾಗತಿಕವಾಗಿ 915 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ‘ಛಾವಾ’ ವಿಶ್ವಾದ್ಯಂತ 650 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನೂ, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಛಾವಾ’ 650 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಫೆ.14ರಂದು ತೆರೆಕಂಡ ಈ ಚಿತ್ರದಲ್ಲಿ ಬಹುಬೇಡಿಕೆ ನಟ ವಿಕ್ಕಿ ಕೌಶಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.




