ಬೆಳಗಾವಿ : ರಾಜ್ಯದಲ್ಲಿ ಕ್ಷೇತ್ರದ ಗೌರವ ಹೆಚ್ಚಾಗುವಂತೆ ಕೆಲಸ ಮಾಡುತ್ತಿದ್ದೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಾನು ಮಾತನಾಡುವುದಕ್ಕಿಂತ ನನ್ನ ಅಭಿವೃದ್ಧಿ ಕೆಲಸಗಳೇ ಮಾತನಾಡುವಂತೆ ಮಾಡಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾವಗಾಂವ -ಬೊಕನೂರ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ನಾನು ಜಾಸ್ತಿ ಭಾಷಣ ಮಾಡುವುದಿಲ್ಲ. ಮಾತನಾಡುವುದಕ್ಕಿಂತ ನನ್ನ ಕೆಲಸಗಳೇ ಮಾತನಾಡಬೇಕು ಎನ್ನುವುದು ನನ್ನ ಧ್ಯೇಯ. ಇಡೀ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳಾಗುವಂತೆ ನೋಡಿಕೊಳ್ಳುತ್ತಿದ್ದೇನೆ. ಜನರು ನನಗೆ ಮತ ಹಾಕಿದ್ದಾರೋ, ಇಲ್ಲವೋ ಎನ್ನುವುದನ್ನು ನೋಡದೇ ಯಾವುದೇ ಪಕ್ಷಪಾತವಿಲ್ಲದೆ ಎಲ್ಲ ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಯಾಗಬೇಕು ಎನ್ನುವುದೊಂದೇ ನನ್ನ ಉದ್ದೇಶ. ಭಾಷಣಕ್ಕಾಗಿ ನಾನು ಎಂದೂ ಕೆಲಸ ಮಾಡುವುದಿಲ್ಲ. ನೀವೆಲ್ಲ ಸೇರಿ ನನ್ನನ್ನು ಮಂತ್ರಿ ಮಾಡಿದ್ದೀರಿ. ರಾಜ್ಯದಲ್ಲಿ ನನ್ನ ಕ್ಷೇತ್ರದ ಗೌರವ ಹೆಚ್ಚಿಸುವ ಕೆಲಸ ಮಾಡಿದ್ದೇನೆ. ಪ್ರತಿ ಗ್ರಾಮದಲ್ಲಿ 2 -3 ಮಂದಿರ ನಿರ್ಮಾಣ ಮಾಡಿದ್ದೇನೆ. ಎಲ್ಲ ರೀತಿಯ ಸೌಲಭ್ಯಗಳು ಸಿಗುವಂತೆ ಮಾಡಿದ್ದೇನೆ. ನಗರದಲ್ಲಿನ ಮೂಲಭೂತ ಸೌಲಭ್ಯಗಳಿಗೆ ಸರಿಸಮನಾಗಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿದ್ದೇನೆ. ಸುಮಾರು 2.50 ಕೋಟಿ ರೂ,ಗಳ ವೆಚ್ಚದಲ್ಲಿ ಈ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗುಣಮಟ್ಟದ ರಸ್ತೆ ನಿರ್ಮಾಣವಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ನಾಗೇಂದ್ರ ನಾವಗೇಕರ್, ಮಲ್ಲಪ್ಪ ಪಾಟೀಲ, ಯಲ್ಲಪ್ಪ ಪಾಟೀಲ, ಕಾಶೀನಾಥ್ ಪಾಟೀಲ, ಮಾರುತಿ ಪಾಟೀಲ, ವಾಸು ಬಿಜಗರಣಿಕರ್, ರಾಜು ಜಾಧವ್, ಶಾಂತು ಸಾವಗಾಂವ್ಕರ್, ಶಿವಾಜಿ ಪಾಟೀಲ, ಭರ್ಮಾ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.
ವರದಿ: ಪ್ರತೀಕ್ ಚಿಟಗಿ