Ad imageAd image

ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ಈಡೇರಿಸಿ ಜನರ ವಿಶ್ವಾಸ ಉಳಿಸಿಕೊಂಡಿದೆ : ಲಕ್ಷ್ಮೀ ಹೆಬ್ಬಾಳಕರ್

Bharath Vaibhav
ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ಈಡೇರಿಸಿ ಜನರ ವಿಶ್ವಾಸ ಉಳಿಸಿಕೊಂಡಿದೆ : ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಈ ಬಾರಿ ಕಾಂಗ್ರೆಸ್ ಪಕ್ಷ ಬೆಂಬಲಿಸಲು ಜಿಲ್ಲೆಯ ಜನರು ನಿರ್ಧರಿಸಿದ್ದಾರೆ ಎಂದ ಸಚಿವರು

ರಾಮದುರ್ಗ: ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಕೊಟ್ಟ ಮಾತು ಉಳಿಸಿಕೊಂಡು ರಾಷ್ಟ್ರ ಮತ್ತು ಜನ ಸೇವೆ ಮಾಡುತ್ತ ಬಂದಿದೆ. ಹಾಗಾಗಿ ಜನರು ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.

ರಾಮದುರ್ಗ ವಿಧಾನಸಭಾ ಕ್ಷೇತ್ರದ ಬನ್ನೂರ್ ತಾಂಡಾ ಸಮುದಾಯ ಭವನ ಹತ್ತಿರ ನಡೆದ ತಾಲೂಕಾ ಬಂಜಾರ ಸಮುದಾಯದ (ತಾಂಡಾಗಳ) ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೆಳಗಾವಿ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮೃಣಾಲ ಹೆಬ್ಬಾಳಕರ್ ಅವರಿಗೆ ಬೆಂಬಲ ನೀಡುವ ಮೂಲಕ ಹರಸಿ, ಆಶೀರ್ವದಿಸಿರಿ ಎಂದು ಬಂಜಾರ ಸಮುದಾಯದ ಜನರಲ್ಲಿ ಸಚಿವರು ವಿನಂತಿಸಿದರು. ರಾಜ್ಯ ಸರ್ಕಾರದಿಂದ ಅನುಷ್ಠಾನಗೊಂಡಿರುವ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಬಂಜಾರಾ ಸಮಾಜದವರು ಸಂತಸಗೊಂಡಿದ್ದಾರೆ. ಜತೆಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬಡವರ, ಶ್ರಮಿಕರ, ರೈತರ ಪಕ್ಷವಾಗಿ ಗುರುತಿಸಿಕೊಂಡಿದೆ. ಮಹಿಳೆಯರ ಸ್ವಾವಲಂಬನೆಗೆ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಚುನಾವಣೆಯ ಸಮಯದಲ್ಲಿ ಎಲ್ಲಿಂದಲೋ ಬಂದು ಕರ್ಮಭೂಮಿ ಎನ್ನುವವರನ್ನು, ಯಾರನ್ನೋ ನೋಡಿ ಮತ ಕೊಡಿ ಎನ್ನುವವರನ್ನು ಜನರು ನಂಬಲು ಸಾಧ್ಯವಿಲ್ಲ. ಜನರ ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಹಾಗಾಗಿ ಎಲ್ಲ ವರ್ಗದ ಜನರು, ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ನಿರ್ಧರಿಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನರೇಗಾ ಯೋಜನೆ ತಂದಿದ್ದು ಕಾಂಗ್ರೆಸ್ ಪಕ್ಷ. ಅನ್ನ ಭಾಗ್ಯ ತಂದಿದ್ದು ಕಾಂಗ್ರೆಸ್ ಪಕ್ಷ. ಬಡವರಿಗಾಗಿನ ಎಲ್ಲ ಯೋಜನೆಗಳನ್ನು ರೂಪಿಸಿದ್ದು ಕಾಂಗ್ರೆಸ್ ಪಕ್ಷ. ಕೇವಲ ಯೋಜನೆ ಘೋಷಣೆಯಷ್ಟೇ ಅಲ್ಲ, ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಬದ್ಧತೆಯನ್ನೂ ಕಾಂಗ್ರೆಸ್ ಹೊಂದಿದೆ. ಕೊಟ್ಟ ವಚನದಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ. ಹಾಗಾಗಿ ಪಕ್ಷ ಬೇಧ, ಜಾತಿ ಬೇಧ ಮರೆತು ಎಲ್ಲರೂ ಈ ಬಾರಿ ಮೃಣಾಲ ಹೆಬ್ಬಾಳಕರ್ ಅವರನ್ನು ಬೆಂಬಲಿಸಬೇಕು ಎಂದು ಸಚಿವರು ಕೋರಿದರು. ಬಂಜಾರಾ ಸಮಾಜದವರ ವೇಷಭೂಷಣ, ಸಂಸ್ಕ್ರತಿ, ಉಡುಪುಗಳನ್ನು ತೊಟ್ಟು ಸಂಭ್ರಮಿಸಿದ ಸಚಿವರು, ಬಂಜಾರಾ ಸಮಾಜದ ಕುಲ ಗುರುಗಳಿಗೆ ಗೌರವ ನಮನ ಸಲ್ಲಿಸಿದರು. ಕಳೆದ ಚುನಾವಣೆಯಲ್ಲಿ ಬಂಜಾರ ಸಮುದಾಯ ಸಂಪೂರ್ಣ ಕಾಂಗ್ರೆಸ್ ಬೆಂಬಲಿಸಿದೆ. ಇದರಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ಸಹ ನಾವು ಕಾಂಗ್ರೆಸ್ ಬೆಂಬಲಿಸುತ್ತೇವೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೃಣಾಲ ಹೆಬ್ಬಾಳಕರ್ ಅವರಿಗೆ ಮತ ನೀಡುತ್ತೇವೆ ಎಂದು ಬಂಜಾರ ಸಮುದಾಯದವರು ಭರವಸೆ ನೀಡಿದರು.

 

ಈ ಸಮಯದಲ್ಲಿ ಮುಖಂಡರಾದ ಪ್ರದೀಪ ಪಟ್ಟಣ, ಪರ್ವತಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ಈರವ್ವ ಲಮಾಣಿ, ಶೇಖರ್ ಸಿದ್ದಲಿಂಗಪ್ಪನವರ, ಜಿ.ಬಿ.ರಂಗನ್ನಗೌಡ, ಜಹುರ್ ಹಾಜಿ, ಪರುಶರಾಮ ಪಮ್ಮಾರ, ತಾರಾಸಿಂಗ್ ರಾಥೋಡ್, ಲಕ್ಷ್ಮಣ ರಾಥೋಡ್, ಕುಮಾರ ರಾಥೋಡ್, ಸೋಮು‌ ಲಮಾಣಿ, ಸುಭಾಷ್ ಪಮ್ಮಾರ್, ಫಕೀರಪ್ಪ ಜಂಗವಾಡ್, ಜೀವಲಪ್ಪ ಲಮಾಣಿ, ಶಿವಪ್ಪ ಪೂಜೇರಿ, ನೀಲಪ್ಪ ದಾಡಿಬಾಂವಿ, ಕೃಷ್ಣ ಲಮಾಣಿ, ರಮೇಶ್ ಲಮಾಣಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!