Ad imageAd image

ಬಿಜೆಪಿ, ಕಾಂಗ್ರೆಸ್ ನವರನ್ನು ಮುಖ್ಯಮಂತ್ರಿ ಮಾಡ್ತಾರಾ? ಕನಸಿನಲ್ಲಿ ಅಂತಹ ವಿಚಾರ ಬಂದಿರಬೇಕು : ಲಕ್ಷ್ಮೀ ಹೆಬ್ಬಾಳಕರ್

Bharath Vaibhav
ಬಿಜೆಪಿ, ಕಾಂಗ್ರೆಸ್ ನವರನ್ನು ಮುಖ್ಯಮಂತ್ರಿ ಮಾಡ್ತಾರಾ? ಕನಸಿನಲ್ಲಿ ಅಂತಹ ವಿಚಾರ ಬಂದಿರಬೇಕು : ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಬೆಳಗಾವಿ: –ಯತ್ನಾಳ ಅವರು ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಲು 2 ಸಾವಿರ ಕೋಟಿ, ಸಚಿವರಾಗಲು 500 ಕೋಟಿ ಹಣ ಅವರ ಹೈಕಮಾಂಡ್ ಗೆ ಕೊಡಬೇಕು ಎಂದು ಹೇಳಿದ್ದರು. ಆದರೆ, ಅವರು ಎಲ್ಲಿಂದ ವಿಷಯ ಸಂಗ್ರಹಿಸುತ್ತಾರೆ, ಯಾಕೆ ಹೀಗೆ ಮಾತನಾಡುತ್ತಾರೆ ಎನ್ನುವುದೇ ವಿಚಿತ್ರ. ಇದಕ್ಕೆ ಯತ್ನಾಳ ಅವರೇ ಉತ್ತರಿಸುವುದು ಸೂಕ್ತ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟರು.

ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಸಲು ಕಾಂಗ್ರೆಸ್ ನವರೇ ದಾಖಲೆ ನೀಡುತ್ತಿದ್ದಾರೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ಅವರು ಬೆಳಗಾವಿಯಲ್ಲಿ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.

ನಾವು ಕಾಂಗ್ರೆಸ್ ನವರು, ಅವರು ಬಿಜೆಪಿಯವರು. ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಅವರು ಮಾಡುತ್ತಾರೆ ಎಂದರೆ, ಸೂರ್ಯ ಪೂರ್ವದ ಬದಲು ಪಶ್ಚಿಮ ದಿಕ್ಕಿನಲ್ಲಿ ಹುಟ್ಟುತ್ತಾನೇನೋ ಎನ್ನುವ ಭಾವನೆ ಬರುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯವಾಡಿದರು.

ಡಿಕೆಶಿ ಸಿಎಂ ಮಾಡಲು ವಿಜಯೇಂದ್ರ ಮೈಸೂರು ಪಾದಯಾತ್ರೆ ಮಾಡುತ್ತಿದ್ದಾರೆ ಮತ್ತು ಡಿಕೆಶಿ ಋಣ ತೀರಿಸಲು ವಿಜಯೇಂದ್ರ ಹೊರಟಿದ್ದಾರೆ ಎಂದು ಯತ್ನಾಳ ಆರೋಪಿಸಿದ್ದರು. ಈ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಅವರ ಕನಸಿನಲ್ಲಿ ಅಂತಹ ವಿಚಾರ ಬಂದಿರಬೇಕು. ಅವರದು ಯಾವ ಋಣ, ಏನು ಋಣ, ನನಗೂ ಗೊತ್ತಿಲ್ಲ. ನಾವಂತೂ ಕಾಂಗ್ರೆಸ್ ನವರು. ಬಿಜೆಪಿಯವರು ನಮಗೆ ಸಹಾಯ ಮಾಡತ್ತಾರೆ ಎಂದರೆ, ನಮಗೆ ಅದರ ಬಗ್ಗೆ ಏನೂ ಗೊತ್ತಾಗುತ್ತಿಲ್ಲ. ನಮ್ಮ ಸಿಎಂ ಮಾಡಲು ಅವರು ಯಾರು ಎಂದು ಪ್ರಶ್ನಿಸಿದರು.

ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಸಿಎಂ, ಡಿಸಿಎಂ ಭೇಟಿ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಅವರು ಭೇಟಿ ನೀಡಿಲ್ಲ ಎಂಬ ಮಾತ್ರಕ್ಕೆ ಪ್ರವಾಹದ ಬಗ್ಗೆ ಮಾಹಿತಿ ಇಲ್ಲ ಎಂದಲ್ಲ. ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಬಂಧಪಟ್ಟ ಜಲಾಶಯಗಳ ಉಸ್ತುವಾರಿ ಸಚಿವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಸಂತ್ರಸ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ಸೂಚಿಸಿದ್ದಾರೆ. 2019ರಲ್ಲಿ ಬೆಳಗಾವಿ ಭೀಕರ ಪ್ರವಾಹ ಸಂಭವಿಸಿತ್ತು. ಆಗ ಪ್ರಧಾನಮಂತ್ರಿ ಇತ್ತ ತಿರುಗಿಯೂ ನೋಡಲಿಲ್ಲ. ಆದರೆ ಸಿಎಂ ಮತ್ತು ಡಿಸಿಎಂ ಅವರಿಗೆ ಬಹಳ ಕಳಕಳಿ ಇದೆ, ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.

ಮುಡಾ ಪಾದಯಾತ್ರೆ ವಿಚಾರದಲ್ಲಿ ಕುಮಾರಸ್ವಾಮಿ ಬಿಜೆಪಿ ವಿರುದ್ದ ತಿರುಗಿ ಬಿದ್ದ ವಿಚಾರಕ್ಕೆ ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದರೂ ಸಂಸದರು ನಾಪತ್ತೆಯಾಗಿದ್ದಾರಲ್ಲಾ ಎನ್ನುವ ಪ್ರಶ್ನೆಗೆ, ಅವರು ಹೊಸದಾಗಿ ಸಂಸದರಾಗಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡಬಹುದು ಎಂದು ಹೇಳಿದರು.

ಜಿಲ್ಲಾ ವಿಭಜನೆ ವಿಚಾರವಾಗಿ ಮಾತನಾಡಿ, 18 ಮತಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ದೊಡ್ಡ ಜಿಲ್ಲೆ ಆಗಿದ್ದರಿಂದ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆ ಆಗುತ್ತಿದೆ. ಹಾಗಾಗಿ, ಜಿಲ್ಲೆ ವಿಭಜಿಸಿ ಎರಡು ಅಥವಾ ಮೂರು ಜಿಲ್ಲೆಯನ್ನಾಗಿಸಬೇಕು ಎನ್ನುವ ಚರ್ಚೆಯಿದೆ‌. ಇದಕ್ಕೆ ನನ್ನ ಸಹಮತವೂ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಹೊಸ ಜಿಲ್ಲೆಗಳ ರಚನೆ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಮನೆ, ಬ್ಯಾರೇಜ್ ಹಾಗೂ ಸೇತುವೆ ಎಷ್ಟು ಬಿದ್ದಿವೆ ಎಂಬ ಬಗ್ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ನಾನೇ ಖುದ್ದಾಗಿ ಖಾನಾಪುರಕ್ಕೆ ಹೋದಾಗ ಪರಿಶೀಲನೆ ಮಾಡಿದ್ದೇನೆ. ದಾಖಲೆಗಿಂತ ವಾಸ್ತವದಲ್ಲಿ ಹೆಚ್ಚು ಮನೆಗಳು ಬಿದ್ದಿವೆ. ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡಬಾರದು. ಈ ಕುರಿತು ಸಧ್ಯವೇ ಪರಿಶೀಲನೆ ಸಭೆ ನಡೆಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ವರದಿ:- ಪ್ರತೀಕ ಚಿಟಗಿ

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!