ತುರುವೇಕೆರೆ: ತಾಲ್ಲೂಕಿನ ಮಾದಿಹಳ್ಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಕಳ್ಳನಕೆರೆ ಕ್ಷೇತ್ರದ ಸದಸ್ಯೆ ಲತಾಯೋಗಾನಂದ್ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷೆ ವಿನೋದ ಮಂಜುನಾಥ್ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ನಾಮಪತ್ರ ಸಲ್ಲಿಕೆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಕಳ್ಳನಕೆರೆ ಕ್ಷೇತ್ರದ ಸದಸ್ಯೆ ಲತಾಯೋಗಾನಂದ್ ಅವರು ಮಾತ್ರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡ ಸಂದರ್ಭದಲ್ಲಿ ಪಂಚಾಯ್ತಿಯ ಸದಸ್ಯರುಗಳ ಪೈಕಿ 10 ಸದಸ್ಯರು ಮಾತ್ರ ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಲತಾಯೋಗಾನಂದ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಚುನಾವಣಾಧಿಕಾರಿ, ತಾಪಂ ಕಾರ್ಯನಿರ್ವಹಣಾದಿಕಾರಿ ಶಿವರಾಜಯ್ಯ, ಲತಾಯೋಗಾನಂದ್ ಅವರು ಮಾದಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಲತಾಯೋಗಾನಂದ್ ಅವರ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಿಡಿಒ ಸುರೇಶ್, ಕಾರ್ಯದರ್ಶಿ ನರೇಂದ್ರ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷೆ ಲತಾಯೋಗಾನಂದ್ ಮಾತನಾಡಿ, ಮಾದಿಹಳ್ಳಿ ಗ್ರಾಮ ಶ್ರೀ ಹುತ್ತದ ಸಿದ್ದೇಶ್ವರ ಸ್ವಾಮಿ ನೆಲೆಸಿರುವ ಪವಿತ್ರ ಕ್ಷೇತ್ರವಾಗಿದೆ. ಇಂತಹ ಪವಿತ್ರ ಕ್ಷೇತ್ರದ ಗ್ರಾಮ ಪಂಚಾಯ್ತಿಯ ಅಧ್ಯಕ್ಷಳಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ ಪಂಚಾಯ್ತಿಯ ಸದಸ್ಯರುಗಳಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.
ರಾಜಕೀಯ ಕ್ಷೇತ್ರಕ್ಕೆ ಬರುತ್ತೇನೆಂಬ ಕಲ್ಪನೆಯೂ ಇಲ್ಲದ ನನ್ನನ್ನು ರಾಜಕೀಯ ಕ್ಷೇತ್ರಕ್ಕೆ ಬರುವಂತೆ ಮಾಡಿ ಜನಸೇವೆ ಮಾಡುವಂತೆ ಪ್ರೋತ್ಸಾಹಿಸಿದ ಜಗದೀಶ್ (ಸೈಕಲ್), ಪಪಂ ಮಾಜಿ ಅಧ್ಯಕ್ಷ ಚಿದಾನಂದ್ ಹಾಗೂ ನನ್ನ ಪತಿ ಯೋಗಾನಂದ್ ಅವರಿಗೆ ಮಾದಿಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯಳಾಗಿ ಆಯ್ಕೆಯಾಗಲು ಕಾರಣಕರ್ತರಾದ ಕಳ್ಳನಕೆರೆ ಗ್ರಾಮಸ್ಥರಿಗೆ ಆಭಾರಿಯಾಗಿದ್ದೇನೆ. ಪಂಚಾಯ್ತಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಪ್ರತಿ ಗ್ರಾಮಕ್ಕೂ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬೇಸಿಗೆ ಪ್ರಾರಂಭವಾಗಿರುವ ಕಾರಣ ಪ್ರತಿ ಹಳ್ಳಿಯ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳುವುದು ಸದ್ಯದ ಮೊದಲ ಆದ್ಯತೆಯಾಗಲಿದೆ. ಸ್ವಚ್ಛತೆ, ವಿದ್ಯುತ್, ಕುಡಿಯುವ ನೀರು, ಮೂಲಸೌಕರ್ಯ ಒದಗಿಸುವುದು, ಪಂಚಾಯ್ತಿಯಲ್ಲಿನ ಸೌಲಭ್ಯಗಳು ಶೀಘ್ರವಾಗಿ ತಲುಪುವಂತೆ ಮಾಡಲು ಕ್ರಮವಹಿಸುವುದಾಗಿ ಹೇಳಿದರು.
ನೂತನ ಅಧ್ಯಕ್ಷೆ ಲತಾಯೋಗಾನಂದ್ ಅವರನ್ನು ಗ್ರಾಪಂ ಉಪಾಧ್ಯಕ್ಷ ಹರೀಶ್, ಸದಸ್ಯರಾದ ಬೊಮ್ಮಲಿಂಗಯ್ಯ, ಗಿರೀಶ್, ಮಂಜುನಾಥ್, ವಿನೋದಮಂಜುನಾಥ್, ನಂಜಮ್ಮ, ಶಿವಮ್ಮ, ವೆಂಕಟೇಶ್, ಕೆಂಪಯ್ಯ, ಪಪಂ ಮಾಜಿ ಅಧ್ಯಕ್ಷರಾದ ಅಂಜನ್ ಕುಮಾರ್, ಚಿದಾನಂದ್, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಜೆಡಿಎಸ್ ಮುಖಂಡ ಪರಮಶಿವಯ್ಯ, ಬಿಎಂಎಸ್ ಉಮೇಶ್, ಜಗದೀಶ್ (ಸೈಕಲ್), ನಿರಂಜನ್ ಸೇರಿದಂತೆ ಅಪಾರ ಅಭಿಮಾನಿಗಳು, ಕಳ್ಳನಕೆರೆ ಗ್ರಾಮಸ್ಥರು ಅಭಿನಂದಿಸಿದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ