ಚೇಳೂರು: ತಾಲೂಕಿನ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾಸ್ಕರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಡಾ. ಭಾಸ್ಕರ್ ಅವರು, ಡಿಸೆಂಬರ್ 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ಚೇಳೂರು ವ್ಯಾಪ್ತಿಯಲ್ಲಿ ಸುಮಾರು 2,050 ಮಕ್ಕಳನ್ನು ಗುರಿಯಾಗಿಟ್ಟುಕೊಳ್ಳಲಾಗಿದ್ದು, ಮೊದಲ ದಿನ ಬೂತ್‌ಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಇಂದಿನ ಬೂತ್ ಮಟ್ಟದ ಅಭಿಯಾನದಲ್ಲಿ ಶೇ. 70 ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆಯಿದೆ ಎಂದರು.
ಬೂತ್‌ಗಳಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದ ಮಕ್ಕಳಿಗಾಗಿ ಮುಂದಿನ ಎರಡು ದಿನಗಳ ಕಾಲ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ತಾಲೂಕಿನಾದ್ಯಂತ ಈ ಅಭಿಯಾನ ಯಶಸ್ವಿಗೊಳಿಸಲು 22 ಅಂಗನವಾಡಿ ಕಾರ್ಯಕರ್ತೆಯರು, 18 ಆಶಾ ಕಾರ್ಯಕರ್ತೆಯರು, 5 ಪಬ್ಲಿಕ್ ಹೆಲ್ತ್ ಸೂಪರ್‌ವೈಸರ್‌ಗಳು ಹಾಗೂ 3 ಸಮುದಾಯ ಆರೋಗ್ಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ, ಎಂದು ಅವರು ಮಾಹಿತಿ ನೀಡಿದರು.
ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಪೋಷಕರು ಸಹಕರಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿ,ಮಂಜುಳ, ಲೀಲಾವತಿ ಗೌತಮಿ, ಅಂಗನವಾಡಿ ಕಾರ್ಯಕರ್ತೆ ಶಿಲ್ಪ, ಕವಿತ, ನಾರಾಯಣಮ್ಮ, ಲಕ್ಷ್ಮೀನರಸಮ್ಮ,. ಆಶಾ ಕಾರ್ಯಕರ್ತೆಯರು ಹಾಗೂ ಪೋಷಕರು ಉಪಸ್ಥಿತರಿದ್ದರು.
ವರದಿ :ಯಾರಬ್. ಎಂ




