ರೋಣ: ಮತಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಎಲ್ಲ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು, ಶಾಲೆಗಳ ಮೂಲಸೌಕರ್ಯಗಳ ಕೊರತೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರೋಣ ಮತಕ್ಷೇತ್ರದ ಶಾಸಕ ಹಾಗೂ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ಎಸ್. ಪಾಟೀಲ ಹೇಳಿದರು.

ತಾಲೂಕಿನ ಮುಗಳಿ ಮತ್ತು ತಳ್ಳಿಹಾಳ ಗ್ರಾಮದಲ್ಲಿ 2022-23ನೇ ಸಾಲಿನ ನಬಾರ್ಡ್ ಆರ್. ಐ. ಡಿ. ಎಫ್. 28 ಯೋಜನೆ ಅಡಿ ಲೋಕೊಪಯೋಗಿ ಇಲಾಖೆ ವತಿಯಿಂದ ನಿರ್ಮಿಸಿದ ಆರ್ ಎಂ ಎಸ್ ಎ ಪ್ರೌಢಶಾಲೆ ಮುಗಳಿ ಹಾಗೂ ಪ್ರಾಥಮಿಕ ಶಾಲೆ, ತಳ್ಳಿಹಾಳ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಗತಿ ಶಿಕ್ಷಣ ಕ್ಷೇತ್ರದ ಮೇಲೆ ಅವಲಂಬನೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯದ ಹೊರತು, ದೇಶದ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಆ ನಿಟ್ಟಿನಲ್ಲಿ ರೋಣ ಮತಕ್ಷೇತ್ರದ ಎಲ್ಲ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ವಿಧಾನಪರಿಷತ್ ಸದಸ್ಯ ಎಸ್. ವಿ. ಸಂಕನೂರ ಮಾತನಾಡಿ ಮುಗಳಿ ಗ್ರಾಮದ ಸಾರ್ವಜನಿಕರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಶಾಲೆ ನಿರ್ಮಿಸಲು ಸ್ಥಳ ಖರೀದಿಸಿದ್ದು ಬಹಳ ಸಂತಸ ತಂದಿದೆ ಎಂದರು.
ದೇಶದ ನಿಜವಾದ ಸಂಪತ್ತು ಎಂದರೆ ವಿದ್ಯಾರ್ಥಿಗಳು ಇಂತಹ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ಅವಶ್ಯವಾಗಿದೆ, ಸರ್ಕಾರದ ಶಿಕ್ಷಣ ಸಂಸ್ಥೆಗಳು ಬಡ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಿವೆ.
ಇಂದಿನ ಸರಕಾರಗಳು ಶಿಕ್ಷಣಕ್ಕಾಗಿ ಸರ್ಕಾರದ ಆಯ ವ್ಯಯದಲ್ಲಿ ಬಾಳಷ್ಟು ಅನುದಾನ ಮೀಸಲಿಡಲಾಗಿದ್ದು, ಶಿಕ್ಷಕರ ಕೊರತೆ ನೀಗಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಗಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೀಮವ್ವ ಗುಳಗುಳಿ. ಉಪಾಧ್ಯಕ್ಷ ಹನುಮಂತಪ್ಪ ಅಸೂಟಿ. ಮುಖಂಡರಾದ ಸಿದ್ದಣ್ಣ ಬಂಡಿ. ವೀರಣ್ಣ ಶೆಟ್ಟರ. ಸಿದ್ದಣ್ಣ ಯಾಳಗಿ. ಇಸೂಪ್ ಇಟಗಿ. ಬಸವರಾಜ ನವಲಗುಂದ. ಶರಣು ಗೋಗೇರಿ ತಾ. ಪಂ ಇಓ ಚಂದ್ರಶೇಖರ್ ಕಂದಕೂರ. ಬಿಇಓ ಎ. ಎನ್.ಕಂಬೋಗಿ. ಸೇರಿದಂತೆ ಮುಗಳಿ ಹಾಗೂ ತಳಿಹಾಳ್ಳ ಗ್ರಾಮದ ಹಿರಿಯರು ಯುವಕರು ಇದ್ದರು.




