500 ಕ್ಕೂ ಅಧಿಕ ಮನೆ, 1.67 ಕೋಟಿ ವೆಚ್ಚ / ಏಳು ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಪೂಜೆ
ತುರುವೇಕೆರೆ : ಮನೆಮನೆಗೆ ಕೊಳಾಯಿ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ಮನೆಮನೆಗೆ ಗಂಗೆ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ತಾಲ್ಲೂಕಿನ ಚೌಡೇನಹಳ್ಳಿ,. ಬೆಸ್ತರಪಾಳ್ಯ, ಎಂ.ಬೇವಿನಹಳ್ಳಿ, ಶ್ರೀರಾಮಪುರ, ಕೆ.ಕೊಪ್ಪ, ಆಯರಹಳ್ಳಿ, ಹೊಣಕೆರೆ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಸುಮಾರು 500 ಕ್ಕೂ ಅಧಿಕ ಮನೆಗಳಿಗೆ ಸುಮಾರು ಒಂದು ಕೋಟಿ 67 ಲಕ್ಷ ರೂ ವೆಚ್ಚದ ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆಮನೆಗೆ ಗಂಗೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಮನೆಮನೆಗೆ ಗಂಗೆ ಕಾಮಗಾರಿಗೆ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಈಗಾಗಲೇ ಚಾಲನೆ ನೀಡಿದ್ದು ಉತ್ತಮವಾಗಿ ಕಾಮಗಾರಿ ನಡೆಯುತ್ತಿದೆ. ತಾಲ್ಲೂಕಿನ ಎಲ್ಲಾ ಗ್ರಾಮಗಳ ಪ್ರತಿ ಕುಟುಂಬಕ್ಕೂ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಕೆಲವೇ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಬಹುತೇಕ ಹಳ್ಳಿಗಳ ರಸ್ತೆಗಳ ಅಭಿವೃದ್ದಿಗೆ ಪೂಜೆ ನೆರವೇರಿಸಲಾಗುವುದು ಎಂದರು.

ಚೌಡೇನಹಳ್ಳಿ ಗ್ರಾಮದಲ್ಲಿ 22 ಲಕ್ಷ, ಬೆಸ್ತರಪಾಳ್ಯ 13 ಲಕ್ಷ, ಎಂ.ಬೇವಿನಹಳ್ಳಿಯಲ್ಲಿ 25 ಲಕ್ಷ, ಶ್ರೀರಾಮಪುರದಲ್ಲಿ 28 ಲಕ್ಷ, ಕೊಪ್ಪದಲ್ಲಿ 22 ಲಕ್ಷ, ಆಯರಹಳ್ಳಿಯಲ್ಲಿ 35 ಲಕ್ಷ, ಹೊಣಕೆರೆ ಗೊಲ್ಲರಹಟ್ಟಿಯಲ್ಲಿ 22 ಲಕ್ಷ ವೆಚ್ಚದಲ್ಲಿ ಮನೆಮನೆಗೆ ಗಂಗೆ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದ ಅವರು, ಗುತ್ತಿಗೆದಾರರು ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಬೇಕು, ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ರಸ್ತೆಗಳನ್ನು ಅಗೆದು ಹಾಗೇ ಬಿಡಬಾರದು, ನಿಯಮ ಪಾಲನೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಮಾವಿನಹಳ್ಳಿ ಉಮೇಶ್ ಚಂದ್ರ, ಮುನಿಯೂರು ಗ್ರಾಪಂ ಅಧ್ಯಕ್ಷೆ ಕಾವ್ಯಮಂಜುನಾಥ್, ಒಕ್ಕಲಿಗ ಸಮಾಜದ ನಿರ್ದೇಶಕ ಕಾಂತರಾಜ್, ಗ್ರಾಮೀಣ ನೀರಿ ಸರಬರಾಜು ಇಲಾಖೆಯ ಇಂಜಿನಿಯರ್ ರವಿಕುಮಾರ್, ಗ್ರಾಪಂ ಸದಸ್ಯರಾದ ರವಿಕುಮಾರ್, ಕೀರ್ತಿ, ಮುಖಂಡರಾದ ಕೊಂಡಜ್ಜಿ ನಟರಾಜ್, ಮಂಜುನಾಥ್, ರೇಣುಕಯ್ಯ, ರಂಗನಾಥ್, ಪಂಚಾಕ್ಷರಿ, ಗುತ್ತಿಗೆದಾರರಾದ ಕೊಂಡಜ್ಜಿ ಸತೀಶ್, ಧವನ್ ಪಟೇಲ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




