ತಿಪಟೂರು: ತಾಲೂಕಿನ ಕಂಚಘಟ್ಟದಿಂದ ಹೊನ್ನವಳ್ಳಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಷಡಕ್ಷರಿ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕ ಷಡಕ್ಷರಿ, ತಿಪಟೂರು ನಗರದಿಂದ ಹೊನ್ನವಳ್ಳಿ ಗ್ರಾಮದವರೆಗೆ ಸುಮಾರು 16 ಕಿಲೋಮೀಟರ್ ವ್ಯಾಪ್ತಿಯ ರಸ್ತೆಯನ್ನು ಡಾಂಬರು ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಸಿ ನಾಗರೀಕರಿಗೆ, ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ರಸ್ತೆಯ ಅಭಿವೃದ್ಧಿ ಕಾಮಗಾರಿ ಹಾಗೂ 28 ಲಕ್ಷ ವೆಚ್ಚದಲ್ಲಿ ಸುರಕ್ಷತಾ ಕಾರ್ಯಗಳ ಕಾಮಗಾರಿ ನಡೆಸಲಾಗುವುದು. ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ಒದಗಿಸಿದೆ, ಅನುದಾನ ದುರುಪಯೋಗ ಆಗಬಾರದು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ಉತ್ತಮ ರಸ್ತೆ ನಿರ್ಮಾಣ ಮಾಡಬೇಕು, ಅಧಿಕಾರಿಗಳು ಆಗಿಂದಾಗ್ಗೆ ಕಾಮಗಾರಿ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ದಯಾನಂದ್, ಗುತ್ತಿಗೆದಾರ ಕೇಶವಮೂರ್ತಿ, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




