ವಿಜಯಪುರ : ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಗದೊಮ್ಮೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರನಿಂದಲೇ ರಾಜ್ಯದಲ್ಲಿ ಪಕ್ಷ ಹಾಳಾಗಿದೆ. ವಿಜಯೇಂದ್ರ ಪಕ್ಷಕ್ಕೆ ಕ್ಯಾನ್ಸರ್ ಗಡ್ಡೆಯಿದ್ದಂತೆ.ಆ ಗಡ್ಡೆ ತೆಗೆದರೆ ಪಕ್ಷಕ್ಕೆ ಅಂಟಿರುವ ರೋಗ ಸಾಯುತ್ತದೆ. ರಾಜ್ಯದಲ್ಲಿ ಬಿಜೆಪಿಗೆ ವಿಜಯೇಂದ್ರ ಕ್ಯಾನ್ಸರ್ ಇದ್ದಂತೆ. ಅದನ್ನು ತೆಗೆದರೆ ಆಗ ಯಡಿಯೂರಪ್ಪ ರಾಜ್ಯದಲ್ಲಿ ಅಡ್ಡಾಡುತ್ತಾರಾ ನೋಡಿ ಎಂದು ಮಾಧ್ಯಮಗಳ ಎದುರು ಯತ್ನಾಳ್ ಗುಟುರು ಹಾಕಿದ್ದಾರೆ.
ಮುಂದುವರಿದು.. ಮೊನ್ನೆ ಕೇಂದ್ರ ಸಚಿವ ಅಮಿತ್ ಅವರು ರಾಜ್ಯಕ್ಕೆ ಬಂದಾಗ, ಯಡಿಯೂರಪ್ಪ ಬೆದರಿಕೆ ಹಾಕಿದ್ದರು. ತನ್ನ ಮಗನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದರೆ ಒಂದು ವಾರದಲ್ಲಿ ಸಾಯುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು.
ಈ ಯಡಿಯೂರಪ್ಪ ಹುಟ್ಟುವುದು, ಸಾಯುವುದರ ಮೇಲೆ ಕರ್ನಾಟಕದ ಭವಿಷ್ಯ ನಿರ್ಧರಿಸಬಾರದು. ನಮಗೆ ರಾಜ್ಯದಲ್ಲಿ ಪ್ರಾಮಾಣಿಕ ಸರ್ಕಾರ ಬೇಕಾಗಿದೆ. ಭ್ರಷ್ಟಾಚಾರ ಕಡಿಮೆಯಾಗಬೇಕಿದೆ. ಬಡಬಗ್ಗರ ಜೀವನ ನೆಮ್ಮದಿಯಾಗಬೇಕಿದೆ.
ಅಮಿತ್ ಶಾ ಅವರು ಅಪ್ಪ-ಮಗನ ಮೇಲೆ ಅವಲಂಬಿಸಿಲ್ಲ. ನಿನ್ನ ಮಗ ರಾಜ್ಯಾಧ್ಯಕ್ಷನಾಗಿರಲು ಅನ್ ಫಿಟ್ ಅಂತಾ ವಿಜಯೇಂದ್ರ ಬಗ್ಗೆ ಶಾ ಯಡಿಯೂರಪ್ಪಗೆ ಈಗಾಗಲೇ ಹೇಳಿಹೋಗಿದ್ದಾರೆ.
ಹೀಗಾಗಿ ನನ್ನ ಮಗನನ್ನು ಉಳಿಸದಿದ್ದರೆ ನಾನು ಸಾಯುವೆ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ಒಬ್ಬ ಯಡಿಯೂರಪ್ಪ ಸಾಯುವುದರಿಂದ ಕರ್ನಾಟಕಕ್ಕೆ ಒಳ್ಳೆಯದಾಗುತ್ತೆ ಎನ್ನುವುದಾದರೆ ಆಗಲಿ ಎಂದು ಯತ್ನಾಳ್ ಗುಡುಗಿದ್ದಾರೆ.




