ತುರುವೇಕೆರೆ: ತಾಲೂಕಿನ ವಕೀಲರ ಸಂಘದ ವತಿಯಿಂದ ವಕೀಲರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ತುರುವೇಕೆರೆ ಹಿರಿಯ ಸಿವಿಲ್ ನ್ಯಾಯಾಧೀಶೆ ಪವಿತ್ರ ಎಂ.ಡಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಇಂಜಿನಿಯರ್, ಕಾರ್ಮಿಕರು ಸೇರಿದಂತೆ ವೃತ್ತಿಪರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅದರಂತೆ ಕಾನೂನಿನ ಮೂಲಕ ಸಮಾಜದಲ್ಲಿ ನೊಂದವರಿಗೆ ನ್ಯಾಯ ದೊರಕಿಸುವ ವಕೀಲರ ದಿನಾಚರಣೆಯನ್ನು ಸಹ ಆಚರಿಸುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ವಕೀಲರುಗಳು ಸಂವಿಧಾನ ಬದ್ಧವಾಗಿ ರೂಪಿತವಾದ ಕಾನೂನಿನ ಮೂಲಕ ತಮ್ಮ ಬಳಿ ಬರುವ ನಾಗರೀಕರಿಗೆ ಸೂಕ್ತ ರೀತಿಯಲ್ಲಿ ಕಾನೂನಿನ ಮಾರ್ಗದರ್ಶನ ಮಾಡಿ ನ್ಯಾಯವನ್ನು ಒದಗಿಸಿಕೊಡಬೇಕು. ಸತ್ಯ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಣೆ ಮಾಡುವ ಮೂಲಕ ನಾಗರೀಕರಿಗೆ ನ್ಯಾಯಾಂಗದ ಮೇಲಿರುವ ನಂಬಿಕೆಯನ್ನು ಉಳಿಸಬೇಕೆಂದರು.
ಈ ಸಂದರ್ಭದಲ್ಲಿ ವಕೀಲರ ಸೇವಾ ಕಾರ್ಯಗಳನ್ನು ಗುರುತಿಸಿ ಸಂಘದ ಕೆಲವು ವಕೀಲರನ್ನು ಸನ್ಮಾನಿಸಲಾಯಿತು.
ಕಿರಿಯ ಸಿವಿಲ್ ನ್ಯಾಯಾಧೀಶ ದೀಪು, ವಕೀಲರ ಸಂಘದ ಅಧ್ಯಕ್ಷ ನಟರಾಜ್, ಉಪಾಧ್ಯಕ್ಷ ಹೆಚ್.ಕೆ. ನಂಜೇಗೌಡ ಮತ್ತು ಕಾರ್ಯದರ್ಶಿ ಎಂ.ಸಿ.ವೈ. ಕುಮಾರ್ ಹಾಗೂ ಸಂಘದ ಎಲ್ಲ ವಕೀಲರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




