Ad imageAd image

30ಕ್ಕೂ ಹೆಚ್ಚು ಅಂಬೇಡ್ಕರ್ ಭವನಗಳ ನಿರ್ಮಾಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Bharath Vaibhav
30ಕ್ಕೂ ಹೆಚ್ಚು ಅಂಬೇಡ್ಕರ್ ಭವನಗಳ ನಿರ್ಮಾಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾದ ಮೇಲೆ ಕಳೆದ 7 ವರ್ಷಗಳಲ್ಲಿ 30ಕ್ಕೂ ಹೆಚ್ಚು ಅಂಬೇಡ್ಕರ್ ಭವನಗಳನ್ನು ನಿರ್ಮಿಸಲಾಗಿದ್ದು, ಅಂಬೇಡ್ಕರ್ ಅವರ ಸಂದೇಶ ಸಾರಲು ಅವರ ಪುತ್ಥಳಿಯನ್ನು ಎಲ್ಲೆಡೆ ನಿರ್ಮಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆನಕನಹಳ್ಳಿ ಗ್ರಾಮದಲ್ಲಿ ನೂತನ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಸಚಿವರು, ಈ ಸಮುದಾಯ ಭವನ ಸಮಗ್ರ ಅಭಿವೃದ್ಧಿ, ಸಾಂಸ್ಕೃತಿಕ ಬೆಳವಣಿಗೆ ಹಾಗೂ ಜನಸೇವೆಗೆ ಕೇಂದ್ರವಾಗಲಿ ಎಂದರು.

ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ ಫಲವಾಗಿ ನಾನಿಂದು ಶಾಸಕಿಯಾಗಿರುವೆ, ರಾಜ್ಯ ಸಚಿವ ಸಂಪುಟದಲ್ಲಿ ಸಚಿವೆಯಾಗಿರುವೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಆಧುನಿಕ ಬಸವಣ್ಣ ಇದ್ದಂತೆ, 12ನೇ ಶತಮಾನದಲ್ಲಿ ಬಸವಣ್ಣ ಮಾಡಿದ ಕಾರ್ಯವನ್ನು ಅಂಬೇಡ್ಕರ್ ಮಾಡಿ ತೋರಿಸಿದರೆಂದು ಬಣ್ಣಿ ಸಿದರು.

ಬೆನಕನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿಕೊಡಬೇಕೆಂಬುದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿತ್ತು. ಇದೀಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಸಚಿವರು ಹೇಳಿದರು.

ಮರು ಜನ್ಮ ಪಡೆದಿರುವೆ
ಅಪಘಾತದಿಂದ ಬದುಕಿ ಮರುಜನ್ಮ ಪಡೆದಿರುವೆ, ಅಪಘಾತದಲ್ಲಿ ಬದುಕುಳಿದಿರುವುದೇ ಹೆಚ್ಚು. ಯಾವ ಜನ್ಮದ ಪುಣ್ಯವೋ ಕಾಣೆ, ಕಾರು ಅಪಘಾತದಲ್ಲಿ ಬದುಕಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ಸಚಿವರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಯುವರಾಜ್ ಕದಂ, ಮಹೇಶ್ ಕೋಲಕಾರ, ಮೋಹನ ಕಾಂಬಳೆ, ಮಲ್ಲೇಶ ಚೌಗಲೆ, ರಮೇಶ ತಡೆಕರ್, ಅನಿಲ ಕಾಂಬಳೆ, ಸಿದ್ದಪ್ಪ ಕಾಂಬಳೆ, ಸುರೇಖಾ ಕೋಲಕಾರ, ರೇಣುಕಾ ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.


====================
* ಗ್ರಾಮೀಣ ಕ್ಷೇತ್ರದ ಜಮೀನುಗಳಿಗೆ ಚಿನ್ನದ ಬೆಲೆ
ಬೆಳಗಾವಿ ನಗರ ಪ್ರದೇಶ ಬೆಳೆದಂತೆ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಜಮೀನುಗಳಿಗೆ ಚಿನ್ನದ ಬೆಲೆ ಬರುತ್ತಿದೆ. ಹಲವು ಗ್ರಾಮಗಳು ನಗರ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿವೆ. ಬೆಳಗಾವಿ ನಗರ ಅಭಿವೃದ್ಧಿಯಾಗಬೇಕು ಅಂದರೆ ಗ್ರಾಮೀಣ ಕ್ಷೇತ್ರವನ್ನೇ ಅವಲಂಭಿಸಬೇಕಿದೆ. ಜಮೀನಿನ ಭವಿಷ್ಯದ ಬಗ್ಗೆ ನೀವೇ (ಜನರು) ನಿರ್ಧರಿಸಬೇಕಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹೇಳಿದರು.

ಹಂಗರಗಾ ಗ್ರಾಮದ ಸರ್ಕಾರಿ ಪ್ರಾಥಮಿಕ ಮರಾಠಿ ಶಾಲೆಗೆ ಮೂರು ಹೆಚ್ಚುವರಿ ಕೊಠಡಿಗಳ ಹಾಗೂ ಕನ್ನಡ ಶಾಲೆಗೆ ಒಂದು ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸಚಿವರು ಮಾತನಾಡಿದರು.

ಹಂಗರಗಾ ಗ್ರಾಮದಲ್ಲಿ ಸುಮಾರು 62.56 ಲಕ್ಷ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳು ನಿರ್ಮಾಣವಾಗಲಿವೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಉತ್ತಮ ಶಿಕ್ಷಣಕ್ಕಾಗಿ ಮೂಲಸೌಕರ್ಯ ಅಭಿವೃದ್ಧಿ ಅತ್ಯಗತ್ಯ. ಶಾಲಾ ವಿದ್ಯಾರ್ಥಿಗಳು ಉತ್ತಮ ವಾತಾವರಣದಲ್ಲಿ ಕಲಿಯಲು ಅನುಕೂಲವಾಗುವಂತೆ ಈ ಹೊಸ ಕೊಠಡಿಗಳ ನಿರ್ಮಾಣದ ಕೆಲಸ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಒದಗಿಸುವುದು ನಮ್ಮ ನಿಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಎಂದರು.

ನಂತರ ಸಚಿವರು, ಹಂಗರಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವಿಠ್ಠಲ ರುಕ್ಮಾಯಿ ಮಂದಿರಕ್ಕೆ ಭೇಟಿ ನೀಡಿದರು.

ಇದಕ್ಕೂ ಮುನ್ನ ಹಿಂಡಲಗಾ ವಿಜಯನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಕನ್ನಡ ಮತ್ತು ಮರಾಠಿ ಶಾಲೆಗಳಿಗೆ ಸುಣ್ಣ-ಬಣ್ಣ ಹಚ್ಚುವ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.

ಇದೇ ವೇಳೆ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಒಂದು ಹೆಚ್ಚುವರಿ ಕೊಠಡಿಯನ್ನು ಸಹ ಸಚಿವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಯುವರಾಜ್ ಕದಂ, ಬಾಳು ಪಾಟೀಲ್, ಅರ್ಜುನ್ ಪಾಟೀಲ್, ನಿವೃತ್ತಿ, ಮೀನಾ ಗೋಡ್ಸೆ, ಯಲ್ಲಪ್ಪ ಪಾಟೀಲ್, ಸುಭಾಷ ತರವಾಳ, ಉಮೇಶ ಗೋಡ್ಸೆ, ಮಲ್ಲೇಶ್ ಚೌಗಲೆ, ಕೃಷ್ಣ ಪಾಟೀಲ್, ಪರಶುರಾಮನು ಪಾಟೀಲ್, ಗಾವಡು ಪಾಟೀಲ್, ಡಿ.ಬಿ.ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ದಾಸಪ್ಪನವರ, ನಿಲೇಶ್ ಸಾವಗಾಂವ್ಕರ್, ಪ್ರಣವ್ ಗೋಡ್ಸೆ ಮುಂತಾದವರು ಉಪಸ್ಥಿತರಿದ್ದರು.
======================
* ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬೆಳಗುಂದಿ ಗ್ರಾಮದಲ್ಲಿ ನೂತನ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭೂಮಿ ಪೂಜೆ ನೆರವೇರಿಸಿದರು.

ಸಮುದಾಯ ಭವನ ನಿರ್ಮಾಣದಿಂದ ನಮ್ಮ ಪರಂಪರೆ, ಒಗ್ಗಟ್ಟು ಮತ್ತು ಭವಿಷ್ಯ ರೂಪಿಸುವ ವೇದಿಕೆಯಾಗಲಿ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಈ ಭವನ ಪ್ರೇರಣಾದಾಯಕ ಕೇಂದ್ರವಾಗಲಿ ಎಂದು ಸಚಿವರು ಹೇಳಿದರು.

* ಪ್ರೊಪ್ಲೆಕ್ಸ್ ಶೀಟ್ ಅಳವಡಿಕೆ ಕಾಮಗಾರಿಗೆ ಚಾಲನೆ

ಬೆಳಗುಂದಿ ಗ್ರಾಮದಲ್ಲಿ‌ ಸರ್ಕಾರಿ‌ ಮರಾಠಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂತನ ಪ್ರೊಫ್ಲೆಕ್ಸ್ ಶೀಟ್ ಅಳವಡಿಸುವ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.‌

ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣ ಪಾಟೀಲ್, ಶಿವಾಜಿ ಬೊಕಡೆ, ದಯಾನಂದ ತಹಶಿಲ್ದಾರ್, ಮಹಾದೇವ್ ಪಾಟೀಲ್, ರಂಜನಾ ಗಾವಡಾ, ನಿಂಗೂಲಿ ಚೌಹಾಣ್, ಸವಿತಾ ತಳವಾರ, ಪ್ರತಾಪ ಸುತಾರ, ಪ್ರಹ್ಲಾದ್ ಚುರಮುರಕರ್, ಕ್ಷೇತ್ರ ಶಿಕ್ಷಣಾಧಿಕಾರಿ ದಾಸಪ್ಪನವರ್, ಮುಖ್ಯ ಶಿಕ್ಷಕ ನಾಗಣ್ಣವರ, ಮನೋಹರ್ ಬೆಳಗಾಂವ್ಕರ್, ಆರ್.ಎಂ.ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

ವರದಿ :ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!