ಬೆಂಗಳೂರು : –ಮಹಿಳೆಗೆ ಎಷ್ಟು ಗೌರವ ಸಿಗುತ್ತೋ ಅಷ್ಟೇ ದೌರ್ಜನ್ಯ ನಡೆಯುತ್ತಿದ್ದು ಮಹಿಳೆಯರು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಮನೆ, ಆರೋಗ್ಯ, ಕೆಲಸ, ಶುದ್ಧ ಗಾಳಿ, ನೆಮ್ಮದಿ, ಶಿಕ್ಷಣ, ಪರಿಸರ, ಪೌಷ್ಠಿಕ ಆಹಾರ ಸೇರಿದಂತೆ ಜೀವನವನ್ನು ಗೌರವಯುತವಾಗಿ ನಡೆಸಲು ಬೇಕಾದ ಹಕ್ಕುಗಳನ್ನು ಪಡೆಯುವುದೇ ಮಾನವ ಹಕ್ಕುಗಳು. ಹಾಗೆಯೇ ಮಹಿಳೆಯರಿಗೆ ಸಮಾನ ವೇತನ ಸಿಗದಿದ್ದಲ್ಲಿ ಕಾರ್ಮಿಕ ನ್ಯಾಯಾಲಯದ ಮೂಲಕ ನ್ಯಾಯ ಪಡೆಯಬೇಕು.
ಮಾನಸಿಕ ಹಾಗೂ ದೈಹಿಕ ದೌರ್ಜನ್ಯ, ಮನೆ ಕೆಲಸದ ಜಾಗದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದವರು ಮಹಿಳಾ ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ ಕಾನೂನಿನ ನೆರವು ಪಡೆಯಬೇಕು’, ಎಂದು ಕಾನೂನು ತಜ್ಞರು ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ಮಾರ್ಗರೇಟ್ ಹೇಳಿದರು.ಸಮಗ್ರ ಜನಾಭಿವೃದ್ಧಿ ಸಂಸ್ಥೆ(ಐಪಿಡಿಪಿ) ವತಿಯಿಂದ ನಿರ್ದೇಶಕರಾದ ಡಾ. ಕೆ ಭೀಮಾ ರವರ ನೇತೃತ್ವದಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಿಧಾನಸೌಧ ಲೇಔಟ್ ಸಮೀಪದ ಕಾವೇರಿ ನಗರದಲ್ಲಿರುವ ಐಪಿಡಿಪಿ ಸಂಸ್ಥೆಯ ಪ್ರದಾನ ಕಚೇರಿ ಸಭಾಂಗಣದಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಮತ್ತು ಮಾನವ ಹಕ್ಕುಗಳ ಅರಿವು ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ವೇಳೆ ಮಾತನಾಡಿದ ಐಪಿಡಿಪಿ ಸಂಸ್ಥೆಯ ನಿರ್ದೇಶಕ ಡಾ. ಕೆ ಭೀಮಾ ನಾಯಕ್ ಐಪಿಡಿಪಿ ಸಂಸ್ಥೆಯ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ. ಮಾನವ ಹಕ್ಕುಗಳು ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವುದರಿಂದ ಮಹಿಳೆಯರು ದೌರ್ಜನ್ಯಕ್ಕೊಳಗದಂತೆ ನೆರವಾಗುತ್ತದೆ’, ಎಂದು ಹೇಳಿದರು.
ಐಪಿಡಿಪಿ ಟ್ರಸ್ಟೀ ಜಗದೀಶ್ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ಐಪಿಡಿಪಿ ಸಂಸ್ಥೆಯ ಸಂಯೋಜಕಿ ಪ್ರಕೃತಿ ಸರ್ವರಿಗೂ ಸ್ವಾಗತಿಸಿದರು.
ಎಸ್.ಹೆಚ್.ಜಿ ಫೀಲ್ಡ್ ಕೋಆರ್ಡಿನೇಟರ್ ಪದ್ಮಾ ಸಿ. ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಎಸ್.ಹೆಚ್.ಜಿ ಪ್ರಾಜೆಕ್ಟ್ ಕೋಆರ್ಡಿನೇಟರ್ ಮಂಜುಳಾ ಕೆ.ಎನ್ ವಂದನಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಪಾರ್ಥಸಾರಥಿ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು, ಐಪಿಡಿಪಿ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು ಮಕ್ಕಳು ಮುಂತಾದವರು ಉಪಸ್ಥಿತರಿದ್ದರು.
ವರದಿ:- ಅಯ್ಯಣ್ಣ ಮಾಸ್ಟರ್