ಸಿರುಗುಪ್ಪ : ನಗರದ ಸಿಡಿಪಿಓ ಕಛೇರಿಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಕಾನೂನು ಅರಿವು ಮತ್ತು ನೆರವು ಹಾಗೂ ಜಾಗೃತಿ ಕಾರ್ಯಕ್ರಮವನ್ನು ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಎಲ್ಲಾ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನದ ಹಕ್ಕನ್ನು ಹೊಂದಿರುವ ಯುವಕ, ಯುವತಿಯರಿಗೆ ಮತದಾನದ ಉದ್ದೇಶಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಇಲಾಖೆಗಳು ತಮ್ಮ ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೂಲಕ ಸ್ಥಳೀಯವಾಗಿ ಜಾಗೃತಿ ಮೂಡಿಸಬೇಕೆಂದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವರಾಜ ಅವರು ಮಾತನಾಡಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನದ ಹಕ್ಕನ್ನು ಪಡೆಯಬೇಕೆಂಬ ಆಶಯದೊಂದಿಗೆ ಘನ ಸರ್ಕಾರ ಈ ಜಾಗೃತಿಯನ್ನು ಮೂಡಿಸುತ್ತಿದೆ. ಎಲ್ಲರೂ ಕಡ್ಡಾಯವಾಗಿ ಮತ ಹಾಕಿ ಹಾಕಿಸಬೇಕೆಂದು ತಿಳಿಸಿದರು.
ಗ್ರೇಡ್-2 ತಹಶೀಲ್ದಾರ್ ಸತ್ಯಮ್ಮ ಅವರು ಮಾತನಾಡಿ ಸಾರ್ವತ್ರಿಕ ಚುನಾವಣೆಯಲ್ಲಿ ನಾವೆಲ್ಲಾ ಜಾತಿ ಮತ ಬೇದವನ್ನು ಬದಿಗೊತ್ತಿ ವಿವೇಚನೆಯಿಂದ ಮತವನ್ನು ಹಾಕುವ ಮೂಲಕ ಪ್ರಜಾಪ್ರಭುತ್ವದ ಮಹತ್ವವನ್ನು ನಾವೆಲ್ಲಾ ಸಾರಬೇಕೆಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪವನ್ ಕುಮಾರ್ ದಂಡಪ್ಪನವರ್ ಮಾತನಾಡಿ ಆಯಾ ತಾಲೂಕು ಮಟ್ಟದಲ್ಲಿ ಸ್ವೀಪ್ ಕಮಿಟಿಯಿಂದ ಜಾಗೃತಿ ಮೂಡಿಸುವುದರ ಜೊತೆಗೆ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾವಿಧಿ ಭೋದಿಸಲಾಯಿತು.
ಮತದಾನ ಕುರಿತು ನಡೆಸಲಾದ ಪ್ರಬಂಧದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಇದೇ ವೇಳೆ ಪ್ಯಾನಲ್ ವಕೀಲರಾದ ಎನ್.ಅಬ್ದುಲ್‌ಸಾಬ್, ಮಲ್ಲಿಗೌಡ, ಟಿ.ವೆಂಕಟೇಶ್ ನಾಯ್ಕ್, ಶಿಶು ಅಭಿವೃದ್ದಿ ಯೋಜನಾ ಕಛೇರಿಯ ಮೇಲ್ವಿಚಾರಕಿ ಹೇಮಾವತಿ, ಹಿರಿಯ ಆರೋಗ್ಯ ನಿರೀಕ್ಷಕ ಹೆಚ್.ಭೀಮರಾಜ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




