ಸಿರುಗುಪ್ಪ: ನಗರದ ಸಿಡಿಪಿಓ ಕಛೇರಿಯ ಸಭಾಂಗಣದಲ್ಲಿ ಗುರುವಾದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಗಳ ಸಹಯೋಗದಲ್ಲಿ ನಡೆದ ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಗೌಸಿಯಾ ಬೇಗಂ ಅವರು ಚಾಲನೆ ನೀಡಿದರು.

ನಂತರ ಮಾತನಾಡಿ ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಕಸ ವಿಲೇವಾರಿ ವಾಹನಗಳ ಧ್ವನಿವರ್ಧಕಗಳಲ್ಲಿ ಕುಷ್ಠರೋಗ ನಿಯಂತ್ರಣ ಹಾಗೂ ಪತ್ತೆ ಹಚ್ಚುವ ಅಭಿಯಾನದ ಬಗ್ಗೆ ಪ್ರಚುರಪಡಿಸಲು ಹಾಗೂ ಡಂಗೂರ ಸಾರಿಸಲು ಆದೇಶಿಸಲಾಗುವುದು. ಶಿಕ್ಷಣ ಮತ್ತು ಶಿಶು ಅಭಿವೃದ್ದಿ ಯೋಜನಾ ಇಲಾಖೆ, ವಸತಿ ನಿಲಯಗಳ ಪಾಲಕರು, ಗ್ರಾಮಮಟ್ಟದ ಆಶಾ ಕಾರ್ಯಕರ್ತೆಯರು ಸಹಕಾರ ನೀಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ಕುಷ್ಠರೋಗ ಮೇಲ್ವಿಚಾರಕ ಪ್ರಹ್ಲಾದ್ರೆಡ್ಡಿ, ಮಾತನಾಡಿ ನವೆಂಬರ್ 3ರಿಂದ 11 ರವರೆಗೆ 2025 ಸಾಲಿನ ಕುಷ್ಠರೋಗ ಪತ್ತೆಹಚ್ಚುವ ಅಭಿಯಾನ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಕುಷ್ಠರೋಗದ ಲಕ್ಷಣಗಳಾದ ತಿಳಿಬಿಳಿ ತಾಮ್ರವರ್ಣದ ಮಚ್ಚೆಗಳು, ಸ್ಪರ್ಶಜ್ಞಾನವಿಲ್ಲದ ಮಚ್ಛೆಗಳು, ಸಿಂಹದಂತಹ ಮುಖವುಳ್ಳ ಮತ್ತು ಮೂಗಿನ ಮೇಲೆ, ಕಿವಿಯ ಮೇಲಿನ ಗಂಟುಗಳು ಇವೆಲ್ಲಾ ಕುಷ್ಠರೋಗದ ಲಕ್ಷಣಗಳಾಗಿವೆ.
ಪ್ರಾರಂಬಿಕ ಹಂತದಲ್ಲಿ ಕಂಡುಹಿಡಿದಲ್ಲಿ ಮುಂದಾಗಬಹುದಾದ ಅಂಗವೈಕಲ್ಯ ಇನ್ನಿತರ ತೊಂದರೆಗಳನ್ನು ನಿವಾರಿಸಬಹುದಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯವಿರುತ್ತದೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮದ್ ಖಾಸೀಂ ತಿಳಿಸಿದರು. ಇದೇ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪವನ್ಕುಮಾರ್ ಎಸ್ ದಂಡಪ್ಪನವರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಮಲ್ಲಿಕಾರ್ಜುನ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹೆಚ್.ಭೀಮರಾಜ್, ಇನ್ನಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ವರದಿ: ಶ್ರೀನಿವಾಸ ನಾಯ್ಕ




