ಹುಬ್ಬಳ್ಳಿ: – ಸಿಎಂ ಸಿದ್ದರಾಮಯ್ಯ ತಮ್ಮ ನೈತಿಕತೆಯನ್ನು ಪ್ರಶ್ನಿಸಿಕೊಳ್ಳಲಿ: ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮಗಿರುವ ಗೌರವ ಉಳಿಯಬೇಕೆಂದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜಕಾರಣದಲ್ಲಿ ಅವರದ್ದೇಯಾದ ಗುರುತಿದೆ.
ತಮ್ಮದೇ ಜನಾಭಿಪ್ರಾಯ ಇದೆ. ಅದನ್ನು ಉಳಿಸಿಕೊಂಡು ಹೋಗಬೇಕಾದರೆ ನೈತಿಕತೆಯ ಮೆಲ್ಪಂಕ್ತಿ ಮೆರೆಯಬೇಕು. ಎಲ್ಲರಂತೆ ಉದಾಹರಣೆ ಕೊಟ್ಟರೆ, ಇವರೂ ಅವರ ಸಾಲಿಗೆ ಸೇರುತ್ತಾರೆ ಎಂದರು.
ಸಿಎಂ ವಿರುದ್ದ ದೂರು ಕೊಟ್ಟಿದ್ದಾರೆ. ಅದರ ಆಧಾರದಲ್ಲಿ ರಾಜ್ಯಪಾಲರು ಆದೇಶ ಕೊಟ್ಟಿದ್ದಾರೆ. ಆ ನಂತರ ಹೈಕೋರ್ಟ್ ಹಾಗೂ ಸೇಷನ್ ಕೋರ್ಟ್ ಆದೇಶ ಕೊಟ್ಟಿದೆ.
ಪ್ರತಿ ಹಂತದಲ್ಲೂ ಕೇಸ್ ಇನ್ನಷ್ಟು ಬಿಗಿಗೊಳ್ಳುತ್ತಿದೆ. ಮುಂದೆ ಚಿಂತನೆ ಮಾಡುವ ಅವಶ್ಯಕತೆ ಇದೆ. ಕೋರ್ಟ್ ನಲ್ಲಿ ಹೋರಾಟ ಮಾಡಲು ಯಾರಿಗಾದರೂ ಅವಕಾಶ ಇದೆ. ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ಅವರ ಮೇಲೆ ಇರುವ ವಿಶ್ವಾಸ ಉಳಿಸಿಕೊಳ್ಳಬೇಕು ಅದನ್ನು ಉಳಿಸಿಕೊಂಡು ಹೋಗುತ್ತಾರೆ ಅನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ಬಿಜೆಪಿ ಹೋರಾಟ ಮುಂದುವರಿಯಲಿದೆ .ಇನ್ನು ವಾಲೀಕಿ ಹಗರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಾಲ್ಮೀಕಿ ಹಗರಣ ಈಗಾಗಲೇ ಒಂದು ಹಂತ ತಲುಪಿದೆ. ಎಸ್ ಐ ಟಿ ಯಲ್ಲಿ ಮಂತ್ರಿಗಳು, ಅಧ್ಯಕ್ಷರ ಹೆಸರಿಲ್ಲದೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಅವಾಗಲೇ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು. ಆದರೆ, ಸಿಬಿಐ, ಇಡಿಯಲ್ಲಿ ತನಿಖೆ ಮಾಡುತ್ತಿರುವುದರಿಂದ ಅವರು ಚಾರ್ಜ್ ಶೀಟ್ ಹಾಕಿದ್ದಾರೆ. ಅವರ ವಿರುದ್ದ ಕ್ರಮ ಕೈಗೊಳ್ಳುವುದು ಅನಿವಾರ್ಯ. ತಪ್ಪು ಆದಲ್ಲಿ ವಿರೋಧ ಪಕ್ಷವಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಅಹಿಂದ ಸಂಘಟನೆಗಳಿಂದ ಬೆಂಗಳೂರು ಚಲೋ ನಡೆಸುವ ಕುರಿತು ಕೇಳಿದ ಪ್ರಶ್ನೆಗೆ ಅದರ ಬಗ್ಗೆ ನಾನು ಏನು ಹೇಳಿಕೆ ನೀಡಲ್ಲ. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಯಿಂದ ಹೋರಾಟ ಮುಂದುವರಿಯಲಿದೆ ಎಂದರು.
ಸಿಎಂ ಸಿದ್ದರಾಮಯ್ಯ ರಾಜಿನಾಮೆ ಕೇಳಲು ಬಿಜೆಪಿಗೆ ಯಾವ ನೈತಿಕತೆ ಇದೆ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಯಾರ ಮೇಲೆ ಆರೋಪ ಇದೆ, ಇಲ್ಲಾ ಅನ್ನುವುದು ಪ್ರಶ್ನೆ ಅಲ್ಲಾ. ಈಗ ಸಿದ್ದರಾಮಯ್ಯ ಅವರ ಪ್ರಶ್ನೆ ಬಂದಿದೆ. ಹಿಂದೆ ಅವರು ವಿರೋಧ ಪಕ್ಷದಲ್ಲಿ ಇದ್ದಾಗ ಎಲ್ಲರ ನೈತಿಕತೆ ಪ್ರಶ್ನೆ ಮಾಡ್ತಿದ್ದರು. ಈಗ ಅವರು ಮುಖ್ಯಮಂತ್ರಿ ಆಗಿದ್ದಾರೆ, ಅವರ ನೈತಿಕತೆ ಪ್ರಶ್ನೆ ಮಾಡಿಕೊಳ್ಳಬೇಕು. ಅದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದರು.
ಶಿಗ್ಗಾವಿಗೆ ಶೀಘ್ರ ಅಭ್ಯರ್ಥಿ ಆಯ್ಕೆ ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಗೆ ಶೀಘ್ರವೇ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.ಈ ಕುರಿತು ಈಗಾಗಲೇ ಎರಡು ಸಭೆಗಳನ್ನು ಮಾಡಲಾಗಿದೆ. ಹಲವು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.ಶಿಗ್ಗಾಂವಿ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಹಾಕುವ ಕುರಿತು ಕೇಳಿದ ಪ್ರಶ್ನೆಗೆ ಕಳೆದ ಹತ್ತು ದಿನಗಳಿಂದ ನಾನು ಊರಲ್ಲಿ ಇರಲಿಲ್ಲ ಹೀಗಾಗಿ ಏನು ಬೆಳವಣಿಗೆ ಆಗಿದೆಯೋ ಗೊತ್ತಿಲ್ಲ. ಆದಷ್ಟು ಬೇಗ ಅಭ್ಯರ್ಥಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ವರದಿ:- ಸುಧೀರ್ ಕುಲಕರ್ಣಿ