ತುರುವೇಕೆರೆ: ಸೇವೆ ನಿಂತ ನೀರಾಗಬಾರದು, ಹರಿಯುವ ನದಿಯಾಗಬೇಕು, ಆಗ ಮಾತ್ರ ಸಮಾಜದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಇನ್ನರ್ ವೀಲ್ ಕ್ಲಬ್ ಜಿಲ್ಲಾಧ್ಯಕ್ಷೆ ಶ್ರೀಮತಿ ಮಾಸ್ಟರ್ ಅಭಿಪ್ರಾಯಪಟ್ಟರು.
ಪಟ್ಟಣದ ಜಯಣ್ಣ ಕನ್ವೆನ್ಶನ್ ಹಾಲ್ ನಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ ಆಯೋಜಿಸಿದ್ದ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಇಂದು ಸಾಕಷ್ಟು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಸಾಧನೆಯ ಜೊತೆಗೆ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಸೇವೆಯಲ್ಲೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ ಎಂದರು.
ತುರುವೇಕೆರೆ ಇನ್ನರ್ ವೀಲ್ ಕ್ಲಬ್ ಸ್ಥಾಪನೆಯಾದ ದಿನದಿಂದ ಸಂಸ್ಥಾಪಕ ಅಧ್ಯಕ್ಷೆ ಗೀತಾ ಸುರೇಶ್, ಲತಾಪ್ರಸನ್ನ ಹಾಗೂ ಪ್ರಸ್ತುತ ನೇತ್ರಾವತಿ ಸಿದ್ದಲಿಂಗಸ್ವಾಮಿ ಹಾಗೂ ಅವರ ತಂಡ ತಾಲೂಕಿನಲ್ಲಿ ಉತ್ತಮ ಸೇವಾ ಚಟುವಟಿಕೆಗಳನ್ನು ನಡೆಸಿ ಜನರ ವಿಶ್ವಾಸಕ್ಕೆ ಪಾತ್ರವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಂಸ್ಥೆಯು ಶಾಶ್ವತ ಯೋಜನೆಗಳ ಕಡೆ ಗಮನಹರಿಸಿ ಮಲ್ಲಾಘಟ್ಟ ಕೆರೆ ಬಳಿ ಬಟ್ಟೆ ಬದಲಿಸಲು ಕುಟೀರ, ಪಟ್ಟಣದಲ್ಲಿ ಎರಡು ತಂಗುದಾಣ ನಿರ್ಮಿಸಿರುವುದು ಸಂಸ್ಥೆಯ ಜನಪರ ಕಾಳಜಿಗೆ ಕಲಶಪ್ರಾಯವಾಗಿದೆ ಎಂದರು.
ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದಿಂದ ಸೇವಾ ಕಾರ್ಯಕ್ರಮದಡಿಯಲ್ಲಿ ಸೀಗೇಹಳ್ಳಿ ಪಪೂ ಕಾಲೇಜಿಗೆ ಪೋಡಿಯಂ, ದ್ವಾರನಹಳ್ಳಿ ಶಾಲೆಗೆ ನಲಿಕಲಿ ಟೇಬಲ್, ಕುರ್ಚಿಯನ್ನು ವಿತರಿಸಲಾಯಿತು. ಸಂಕಲ್ಪದ ಅಧ್ಯಕ್ಷೆ ನೇತ್ರಾವತಿ ಸಿದ್ದಲಿಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆನಂದಜಲ, ಖಜಾಂಚಿ ಸವಿತ ಅನಿಲ್ ಸೇರಿದಂತೆ ಸಂಕಲ್ಪದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್