——-ಶಮನೇವಾಡಿಯಲ್ಲಿ ಸಮುದಾಯ ಭವನ ಉದ್ಘಾಟನೆ ವೇಳೆ ಪಂಚಮ ಶಿವಲಿಂಗೇಶ್ವರ ಸ್ವಾಮಿಗಳ ಅಭಿಮತ
ನಿಪ್ಪಾಣಿ: ನಮ್ಮನಾಡಿನ ಸಂಸ್ಕೃತಿ,ಇತಿಹಾಸ, ಧರ್ಮದ ಉಳಿವಿಗೆ ಅಹಿಲ್ಯಾಬಾಯಿ ಹೊಳಕರ, ಅಬ್ಬಕ್ಕಾ, ದೈನತಿದೇವಿ ಯಂತಹ ಮಹಾನ್ ಮಹಿಳೆಯರು ಶ್ರಮಿಸಿದ್ದಾರೆ. ಇಂಥವರನ್ನು ಅರ್ಥೈಸಿಕೊಳ್ಳಬೇಕಾದರೆ ಸಮುದಾಯ ಭವನಗಳು ಅಗತ್ಯವೆಂದು ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ತಿಳಿಸಿದರು.
ಅವರು ಚಿಕ್ಕೋಡಿ ತಾಲ್ಲೂಕಿನ ಶಮನೇವಾಡಿ ಗ್ರಾಮದ ರಾಮಲಿಂಗೇಶ್ವರ ಮಂದಿರದಲ್ಲಿ ಕಟ್ಟಲಾದ ನೂತನ ಸಮುದಾಯ ಭವನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಪ್ರಾರಂಭದಲ್ಲಿ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಹಾಗೂ ಚಿಕ್ಕೋಡಿ ಸಂಪಾದನಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ರಿಬ್ಬನ ಬಿಚ್ಚುವುದರೊಂದಿಗೆ ಸಮುದಾಯ ಭವನ ಉದ್ಘಾಟಿಸಿದರು.
ಇದೇ ಸಂಧರ್ಭದಲ್ಲಿ ವೈಶಾಲಿ ಪ್ರದೀಪ್ ತಾರದಾಳೆ ದಂಪತಿಗಳು ಶ್ರೀಗಳ ಪಾದ ಪೂಜೆ ಮಾಡಿದರು. ನಂತರ ನಡೆದ ವೇದಿಕೆ ಸಮಾರಂಭದಲ್ಲಿ ದೀಪ ಪ್ರಜ್ವಲನೆ, ಹಾಗೂ ವೇದಿಕೆಯಲ್ಲಿಯ ಗಣ್ಯರಿಗೆ ರಾಮಲಿಂಗೇಶ್ವರ ದೇವಸ್ಥಾನ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು. ಇದೆ ವೇಳೆ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಶ್ರಾವಣ ಮಾಸದ ಸಂಧರ್ಭದಲ್ಲಿ ಸಮುದಾಯ ಭವನದ ಉದ್ಘಾಟನೆ ನನ್ನ ಹಸ್ತದಿಂದ ನಡೆದಿದ್ದು ನನ್ನ ಭಾಗ್ಯ. ಸಮುದಾಯ ಭವನಗಳು ಕೇವಲ ವಿವಾಹ ಸಮಾರಂಭಕ್ಕಷ್ಟೇ ಸೀಮಿತವಾಗಿರದೆ ಭಕ್ತಿ, ಭಜನೆ ಸೇರಿ ಧಾರ್ಮಿಕ ಕೈಂಕರ್ಯಗಳು ನಡೆಯಬೇಕೆಂದರು.
ಸಮಾರಂಭದಲ್ಲಿ ಅನ್ನ ಸಂತರ್ಪಣೆಯನ್ನು ದಾನಿಗಳಾದ ಜಯಕುಮಾರ ಖೋತ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕ್ಷೇತ್ರ ಯೋಜನಾಧಿಕಾರಿ ಮಂಜು ನಾಯಕ, ರಾಮಗೌಡಾ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುದರ್ಶನ್ ಖೋತ, ಸುನಿಲ ನಾರೆ,ಚಂದ್ರಕಾಂತ ಮುನ್ನೊಳೆ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕಲ್ಪನಾ ತಾರದಾಳೆ, ಸೇರಿದಂತೆ ರಾಮಲಿಂಗ ದೇವಸ್ಥಾನ ಕಮಿಟಿ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




