ಕಲಬುರಗಿ : ಎನ್ ಕೌಂಟರ್ ಮಾಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಪತ್ರ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ನನ್ನನ್ನು ಎನ್ ಕೌಂಟರ್ ಮಾಡುವುದಾಗಿ ಬೆದರಿಕೆ ಪತ್ರ ಬರೆದು ನನ್ನ ಕಚೇರಿಗೆ ಕಳುಹಿಸಿದ್ದಾರೆ, ಅವಾಚ್ಯ ಶಬ್ದಗಳಿಂದ ನನ್ನ ಕುಟುಂಬವನ್ನು ನಿಂದಿಸಿದ್ದಾರೆ, ಅಲ್ಲದೇ ಜಾತಿ ಹೆಸರನ್ನು ಸಹ ಬಳಸಿ ನಿಂದನೆ ಮಾಡಲಾಗಿದೆ.
ಬೆಂಗಳೂರಿನ ವಿಕಾಸಸೌಧ ಕಚೇರಿಗೆ ಪತ್ರ ಬಂದಿದೆ. ಈ ಸಂಬಂಧ ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ಹೆಣ ಬೀಳಿಸಿಯಾದ್ರೂ ಚುನಾವಣೆ ಗೆಲ್ಲುವ ಪ್ಲ್ಯಾನ್ ಮಾಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.